ಜಗಳೂರು : ಕೂಲಿ ಕಾರ್ಮಿಕರ ಹಣ ಸಾಲಕ್ಕೆ ಜಮಾ ಖಂಡಿಸಿ ಪ್ರತಿಭಟನೆ

ಜಗಳೂರು, ಜು.22- ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯ ಕೂಲಿ ಕಾರ್ಮಿಕರ ಹಣವನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ  ಒತ್ತಾಯಿಸಿ ಗ್ರಾಕೋಸ್ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಮನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ‌ ನಡೆಸಿ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ತಾಲ್ಲೂಕು ಅಧ್ಯಕ್ಷ ರಾದ ಸುಧಾ ಪಲ್ಲಾಗಟ್ಟೆ, ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರು ಕೆಲ ದಿನಗಳಿಂದ  ಕೆಲಸ ಮಾಡಿದ್ದಾರೆ. ಕೂಲಿ ಕಾರ್ಮಿಕರ ಖಾತೆಗೆ ಜಮಾ ಆಗಿರುವ ನರೇಗಾ ಅನುದಾನದ ಹಣ ವನ್ನು ಸಾಲಕ್ಕೆ ಪಡೆಯುವಂತಿಲ್ಲ ಎಂಬ  ಸರ್ಕಾ ರದ ಆದೇಶವಿದ್ದರೂ ಉಲ್ಲಂಘಿಸಿ, ಕೂಲಿಕಾರರ  ಪರವಾನಿಗೆ ಸಹಿಯಿಲ್ಲದೆ ಬ್ಯಾಂಕ್ ಸಿಬ್ಬಂದಿಗಳು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ದಿದ್ದಿಗಿ, ಪಲ್ಲಾಗಟ್ಟೆ, ಬಸವನಕೋಟೆ, ಬಿಸ್ತುವಳ್ಳಿ, ಹನುಮಂತಾಪುರ ಸೇರಿದಂತೆ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಬ್ಯಾಂಕ್ ಸಾಲ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇನ್ನು ದೊಣ್ಣೆಹಳ್ಳಿ ಗ್ರಾ.ಪಂ.ನಲ್ಲಿ ಚಾರ್ಪಿಂಗ್ ಚಾಟ್ ನೀಡುತ್ತಿಲ್ಲ. ಹನುಮಂತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೆಲಸ ನೀಡುತ್ತಿಲ್ಲ. ಕೆಲವೆಡೆ ಜಾಬ್ ಕಾರ್ಡ್ ಒದಗಿಸಿಲ್ಲ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ನಾಗರತ್ನ, ಕೃಷ್ಣ, ಸಮಾದಪ್ಪ, ರಾಘವೇಂದ್ರ, ಮಂಜಮ್ಮ, ಸುಶೀಲ, ರೇಣುಕಮ್ಮ, ದ್ಯಾಮಕ್ಕ, ನಾಗರಾಜ್, ಅಂಜಿನಪ್ಪ, ಶಿವಣ್ಣ, ಪರಮೇಶ್ವರಪ್ಪ, ಬಸವರಾಜ್, ಶಿವಕುಮಾರ್‌ ಇನ್ನಿತರರು ಭಾಗವಹಿಸಿದ್ದರು.

error: Content is protected !!