ಹರಿಹರ, ಜು.21- ಶ್ಯಾಮ್ ಪ್ರಸಾದ್ ಮುಖರ್ಜಿ ಹುಟ್ಟು ಹಬ್ಬದ ನಿಮಿತ್ತ ಕೊಂಡಜ್ಜಿ ಮತ್ತು ಕೊಮಾರನಹಳ್ಳಿ ಅರಣ್ಯ ಪ್ರದೇಶದಲ್ಲಿ ಇನ್ನೂ ಮೂರು-ನಾಲ್ಕು ದಿನಗಳಲ್ಲಿ 30 ಸಾವಿರ ಬೀಜದ ಉಂಡೆಗಳನ್ನು ಹಾಕುವ ಮೂಲಕ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹನಗವಾಡಿ ಎಸ್.ಎಂ. ವೀರೇಶ್ ತಿಳಿಸಿದ್ದಾರೆ.
ನಗರದ ರಚನಾ ಕ್ರೀಡಾ ಟ್ರಸ್ಟ್‌ನಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಮತ್ತು ಮಲೆನಾಡು ಭಾಗದ ಅರಣ್ಯ ಪ್ರದೇಶದಲ್ಲಿ ಉಂಡೆಗಳನ್ನು ಹಾಕುವ ಕೆಲಸವನ್ನು ಸ್ವಯಂ ಸೇವಕ ಸಂಘಟನೆಯ ಮುಖಂಡರು ಮಾಡಿದ್ದರಿಂದ ಪ್ರೇರಣೆಗೊಂಡು ಕಾಡಿನಲ್ಲಿ ಇರುವ ಪ್ರಾಣಿ-ಪಕ್ಷಿಗಳಿಗೆ ಅನುಕೂಲ ಆಗಲು ದಾವಣಗೆರೆಯ ಜಿಎಂಐಟಿ ಕಾಲೇಜು ಹಿಂಬದಿಯಲ್ಲಿ ಕಳೆದ ಹತ್ತು ದಿನಗಳಿಂದ ಹತ್ತು ಲೋಡ್ ಗುಣಮಟ್ಟದ ಮಣ್ಣನ್ನು ತರಿಸಿ 20ಕ್ಕೂ ಹೆಚ್ಚು ಉತ್ಕೃಷ್ಟ ತಳಿಗಳಿಂದ ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಪಕ್ಷದ ವಿವಿಧ ಮಂಡಲದ ಸುಮಾರು 500 ಪ್ರಮುಖರು ಸೇರಿ ಸುಮಾರು 1 ಲಕ್ಷದ 5 ಸಾವಿರ ಉಂಡೆಗಳನ್ನು ತಯಾರಿಸಿ ಸಿದ್ಧತೆ ಮಾಡಲಾಗುತ್ತಿದೆ. ಅದರಲ್ಲಿ ಹರಿಹರ ತಾಲ್ಲೂಕಿನ ಕೊಮಾರನಹಳ್ಳಿ ಮತ್ತು ಕೊಂಡಜ್ಜಿ ಅರಣ್ಯ ಪ್ರದೇಶದಲ್ಲಿ 30 ಸಾವಿರ ಉಂಡೆಗಳನ್ನು ಹಾಕಲು ಸಿದ್ಧಪಡಿಸಲಾಗಿದೆ. ಕಾಡು ಬೆಳೆದರೆ ಮಳೆ ಬೆಳೆಗಳು ಚೆನ್ನಾಗಿ ಬರುತ್ತವೆ. ಹಾಗಾಗಿ ಪಕ್ಷವು ಈ ಕಾರ್ಯಕ್ಕೆ ಮುಂದಾಗಿದ್ದು, ಪ್ರತಿ ವರ್ಷವೂ ಸಹ 1 ಲಕ್ಷ ಉಂಡೆಗಳನ್ನು ತಯಾರಿಸಿ ಕಾಡಿನಲ್ಲಿ ಹಾಕುವುದಾಗಿ ಹೇಳಿದರು.
ಹರಿಹರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬಿಜೆಪಿ ಸಂಪೂರ್ಣ ಬೆಂಬಲ ಇದೆ. ಆದರೆ ಕೇಂದ್ರದ ವೈದ್ಯಕೀಯ ಇಲಾಖೆಯ ಪ್ರಕಾರ ಹರಿಹರ ನಗರದಲ್ಲಿ ಮಾಡುವುದಕ್ಕೆ ತಾಂತ್ರಿಕ ಮಾನದಂಡಗಳ ತೊಂದರೆ ಇದೆ ಎಂದು ಹೇಳುತ್ತಿದ್ದಾರೆ. ಅದನ್ನು ಬಿಟ್ಟು ಸಂಸದರು ದಾವಣಗೆರೆ ನಗರದಲ್ಲಿ ಖಾಸಗಿ ಆಸ್ಪತ್ರೆಯನ್ನು ಪ್ರಾರಂಭಿಸುವ ಉದ್ದೇಶದಿಂದ ಹೇಳಿಕೆಯನ್ನು ಕೊಡಿಸಿರುವುದಿಲ್ಲ. ಒಂದು ವೇಳೆ ಎಲ್ಲರು ಇನ್ನೊಂದು ಸಾರಿ ಇದಕ್ಕೆ ಸಂಬಂಧಿಸಿದ ಇಲಾಖೆಯ ಜೊತೆಯಲ್ಲಿ ಚರ್ಚೆ ಮಾಡುವುದಕ್ಕೆ ಮುಂದಾದರೆ ನಾನು ಕೂಡ ಭಾಗವಹಿಸಲು ಸಿದ್ಧವಿರುವುದಾಗಿ ವೀರೇಶ್ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್ ಹಿಂಡಸಘಟ್ಟ, ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ಹಲಸಬಾಳು ಶಿವಾನಂದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ವಿಜಯಕುಮಾರ್, ಹನುಮಂತಪ್ಪ, ರಜನಿಕಾಂತ್, ಸುರೇಶ್ ತೇರದಾಳ, ರಾಘವೇಂದ್ರ, ರಾಜ್ಯ ಮಹಿಳಾ ಕಾರ್ಯಕಾರಿಣಿ ಸಮಿತಿಯ ಸದಸ್ಯೆ ಪ್ರಮೀಳಾ ನಲ್ಲೂರು, ರೂಪಾ ಕಾಟ್ವೆ, ತುಳಜಪ್ಪ ಭೂತೆ, ಚಂದ್ರಪ್ಪ, ಮಲೇಬೆನ್ನೂರು ರಾಜು, ಸಿದ್ದಪ್ಪ, ವೀರೇಶ್ ಆದಾಪುರ, ಸಾಲಕಟ್ಟಿ ಸಿದ್ದಪ್ಪ, ಶ್ರೀನಿವಾಸ್ ಚಂದಾಪೂರ್, ಪ್ರಶಾಂತ್ ಇನ್ನಿತರರಿದ್ದರು.