ಕೂಡ್ಲಿಗಿ, ಜು.21- ತಾಲ್ಲೂಕಿನ ಶಿವಪುರ ಗ್ರಾ.ಪಂ ವ್ಯಾಪ್ತಿಯ, ಬಂಡೇ ಬಸಾಪುರ ತಾಂಡಾದ ಸುಮಾರು1500 ಜನ ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗೋವಿಂದಗಿರಿ ತಾಂಡಾದಿಂದ 500 ಜನರು ಕೆಲಸ ಹುಡುಕಿಕೊಂಡು ಮಂಡ್ಯ, ಮದ್ದೂರು ಕಡೆ ಗುಳೇ ಹೋಗಿದ್ದಾರೆ. ಇದು ಹಲವು ದಶಕಗಳಿಂದ ಪ್ರತಿ ವರ್ಷ ಜರುಗುವ ಪ್ರಕ್ರಿಯೆಯಾಗಿದೆ. ಗುಳೇ ಹೋಗುವುದರಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಮಕ್ಕಳು, ವೃದ್ಧರು ಅನಾರೋಗ್ಯದಿಂದ ಬಳಲುವಂತಾಗಿದ್ದು, ತಾಲ್ಲೂಕು ಆಡಳಿತ ಗುಳೇ ಹೋಗುವುದನ್ನು ತಪ್ಪಿಸಬೇಕಿದೆ. ಇದಕ್ಕಾಗಿ ಉದ್ಯೋಗ ಸೃಷ್ಟಿಸಬೇಕಿದ್ದು, ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಕೂಡ್ಲಿಗಿ ತಾಲ್ಲೂಕು ಹುಣಸೆ ಸಾಗಾಣಿಕೆಗೆ ಹೆಸರಾಗಿದ್ದು, ಉದ್ಯೋಗ ಸೃಷ್ಟಿಗಾಗಿ ಹುಣಸೆ ಹಣ್ಣಿನ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಪ್ರಾರಂಭಿಸಬೇಕಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ. ವೃಷಭೇಂದ್ರ ಈ ಮೂಲಕ ಒತ್ತಾಯಿಸಿದ್ದಾರೆ.