ದಾವಣಗೆರೆ, ಮಾ.4- ಈ ನಾಡಿನ ಅನ್ನದಾತನಿಗೆ ನೆರವಾಗುವ ನಿಟ್ಟಿನಲ್ಲಿ ವಿಜ್ಞಾನದ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನೆರವಾಗಲಿ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಿರಂಜನಮೂರ್ತಿ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಸಿದ್ಧಗಂಗಾ ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಥೇಚ್ಚವಾದ ರಸಗೊಬ್ಬರ ಮತ್ತು ಕೀಟನಾಶಕ ಗಳ ಬಳಕೆಗಳಿಂದ ಭೂಮಿ ಬರಡಾಗುತ್ತಿದೆ ಎಂದರು.
ಬದುಕನ್ನು ದುರ್ಬಲಗೊಳಿಸುವ ಯಾವುದೇ ಸಂಶೋಧನೆಗಳು ನಮಗೆ ಅಗತ್ಯವಿಲ್ಲ. ಪರಿಸರದ ಉಳುವಿಗಾಗಿ ಅನ್ವೇಷಣೆಗೊಂಡ ವಿಜ್ಞಾನ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.
ಕೋವಿಡ್-19 ಲಸಿಕೆ ಸಂಶೋಧಿಸುವಲ್ಲಿ ಭಾರತ ಯಶಸ್ವಿಯಾಗಿದೆ. ತ್ವರಿತಗತಿಯಲ್ಲಿ ಲಸಿಕೆ ಕಂಡುಹಿಡಿದ ರಾಷ್ಟ್ರಗಳಲ್ಲಿ ಭಾರತವೂ ಸೇರಿರುವುದು ಹೆಮ್ಮೆಯ ವಿಚಾರ ಎಂದರು.
ಬಹುಮಾನ ವಿಜೇತರು
- ಪಿ. ಪಲ್ನಾಕರ್ ಮತ್ತು ನಿಖಿತ ಎಸ್ ರಾಜ್, ಶಾಮನೂರು ಪುಷ್ಪಾ ಮಹಾಲಿಂಗಪ್ಪ ಶಾಲೆ, ದಾವಣಗೆರೆ (ಪ್ರಥಮ).
- ಯೋಗಪ್ರಿಯ ವೈ.ಇ. ಮತ್ತು ವಿಶ್ವಾಸ್ ಹೆಚ್.ಎನ್. ಕೇಂದ್ರೀಯ ವಿದ್ಯಾಲಯ, ಆವರಗೊಳ್ಳ (ದ್ವಿತೀಯ).
- ಸೂರ್ಯ ಎಸ್. ಮತ್ತು ವಂಶಿತ ಎಲ್. ತರಳಬಾಳು, ಜಗದ್ಗುರು ಸೆಂಟ್ರಲ್ ಸ್ಕೂಲ್, ದಾವಣಗೆರೆ (ತೃತೀಯ).
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ರಸಪ್ರಶ್ನೆ ಮೂಲಕ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂ ದಲೇ ಅಣಿಗೊಳಿಸುವಂತಹ ವಾತಾವರಣವನ್ನು ವಿಜ್ಞಾನ ಪರಿಷತ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಚಿಗುರೊಡೆದು ಭಾರತಕ್ಕೆ ನೋಬೆಲ್ ಬಹುಮಾನ ತಂದುಕೊಡುವಂತಹ ವಿಜ್ಞಾನಿಗಳು ಸೃಷ್ಠಿಯಾಗಬೇಕೆಂದು ಆಶಿಸಿದರು.
ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ. ವಸಂತಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ಮೂಲ ವಿಜ್ಞಾನವನ್ನು ಅಭ್ಯಾಸ ಮಾಡುವ ಕಡೆ ಗಮನಹರಿಸ ಬೇಕು. ಪ್ರಸಕ್ತ ಅನೇಕ ಹೊಸ ಕಾಯಿಲೆಗಳು ವೈದ್ಯ ವಿಜ್ಞಾನಿಗಳಿಗೆ ಸವಾಲಾಗಿವೆ ಎಂದರು.
ಸಿದ್ಧಗಂಗಾ ವಿದ್ಯಾಸಂಸ್ಥೆ ಹಿರಿಯ ಶಿಕ್ಷಕಿ ಎಸ್. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು.
ಕ.ರಾ.ವಿ.ಪ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಶಿಕ್ಷಕರಾದ ಕೆ.ಸಿ. ಬಸವರಾಜು, ಎಂ. ಬಸವರಾಜಗೌಡ ಉಪಸ್ಥಿತರಿದ್ದರು.
ಸಿದ್ಧಗಂಗಾ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶಿಕ್ಷಕ ಅಂಗಡಿ ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಸಿದ್ಧಸ್ವಾಮಿ ವಂದಿಸಿದರು. ಜಿಲ್ಲೆಯ 81 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.