ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಶ್ಲ್ಯಾಘನೆ
ಸಾಣೇಹಳ್ಳಿ, ಮೇ 2- ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿಸಿದವರು ತರಳಬಾಳು ಹಿರಿಯ ಜಗದ್ಗುರು ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಅವರಿಗೆ ಬಸವಣ್ಣನವರ ತತ್ವಾದರ್ಶಗಳ ಬಗ್ಗೆ ಅಪಾರ ಗೌರವವಿತ್ತು ಎಂದು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ ಶ್ರೀ ಶಿವಕುಮಾರ ರಥೋತ್ಸವ ಸಮಿತಿ ಅಂತರ್ಜಾಲದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 107ನೇ ಜಯಂತಿ ಕುರಿತು ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿವಕುಮಾರ ಶ್ರೀಗಳು ನಮ್ಮ ಕಾಲದ `ಯುಗ ಪುರುಷರು’. ಅವರ ವ್ಯಕ್ತಿತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ಸಾಣೇಹಳ್ಳಿಯಲ್ಲಿ ಪ್ರತಿವರ್ಷ ಈ ದಿನದಂದು ಅವರ ರಥೋತ್ಸವವನ್ನು ಯಾವುದೇ ಮೂಢನಂಬಿಕೆ, ಕಂದಾಚಾರಗಳಿಗೆ ಆಸ್ಪದವಿಲ್ಲದೆ ವೈಜ್ಞಾನಿಕವಾಗಿ ಆಯೋಜಿಸುತ್ತಾ ಬರಲಾಗಿದೆ ಎಂದರು.
ಶಿವಕುಮಾರ ಶ್ರೀಗಳವರ ಬದುಕಿನಲ್ಲಿ ಕಾಲ, ಕಾಸು, ಕಾಯಕಕ್ಕೆ ಎಲ್ಲಿಲ್ಲದ ಮಹತ್ವವಿತ್ತು. ಒಂದಿಷ್ಟು ಏರು ಪೇರಾದರೂ ಸಹಿಸುತ್ತಿರಲಿಲ್ಲ. ಈ ಬಗ್ಗೆ ಅನೇಕರಿಗೆ ಪ್ರೋತ್ಸಾಹಿಸಿ, ಕೆಲವೊಮ್ಮೆ ಗದರಿಸಿ, ಬೈದು ಬುದ್ದಿ ಹೇಳುತ್ತಿದ್ದರು ಎಂದು ಹೇಳಿದರು.
ವಿದ್ಯಾಸಂಸ್ಥೆಯ ನೌಕರರ ಬಗ್ಗೆ ಅವರಿಗೆ ಅಪಾರ ಅಭಿಮಾನ ವಿತ್ತು. ಸಂಸ್ಥೆಯನ್ನು ಸ್ಥಾಪಿಸಿದವರು ನಾವಾದರೂ ಅದನ್ನು ಬೆಳೆಸಿ ದವರು ನೌಕರರು ಎಂದು ಹೇಳುತ್ತಿದ್ದರು. ಮಠದ ನಿಜ ವಾದ ಆಸ್ತಿ ಭಕ್ತರು, ಅನುಯಾಯಿಗಳೇ ಹೊರತು ಧನ-ಕನಕಗಳಲ್ಲ ಎನ್ನುತ್ತಿದ್ದರು. ಪೀಠವೆಂದೂ ಶಾಶ್ವತವಲ್ಲ. ಅದೊಂದು ಸೇವೆಗೆ ಸಾಧನ ಮಾತ್ರ ಎಂದು ಪರಿಭಾವಿಸಿ ಅದರಂತೆ ನಡೆದುಕೊಂಡವರು ಎಂದು ನುಡಿದರು.
ಸಂವಾದದಲ್ಲಿ ಸಾಣೇಹಳ್ಳಿಯವರು ತರಳಬಾಳು ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಪ್ರಸ್ತುತ ಸಾಧು ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಸಾಹುಕಾರ್ ಸಿದ್ದಪ್ಪ, ನಿವೃತ್ತ ಮುಖ್ಯಶಿಕ್ಷಕ ಬಿ.ಪಿ. ಓಂಕಾರಪ್ಪ ಶ್ರೀಗಳೊಂದಿಗಿನ ತಮ್ಮ ಅನುಭವ ಹಂಚಿಕೊಂಡರು.
ಹೆಚ್.ಎಸ್. ದ್ಯಾಮೇಶ್ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಹೆಚ್.ಎಸ್. ನಾಗರಾಜ್, ಸಾಹಿತ್ಯ ಡಿ.ಎಸ್. ಸುಪ್ರಭೆ, ಡಿ.ಜೆ. ಮುಕ್ತಾ, ಡಿ ಶರಣ್‌ಕುಮಾರ್ ಅವರು ಮಹದೇವ ಬಣಕಾರರು, ಶಿವಕುಮಾರ ಶ್ರೀಗಳ ಕುರಿತು ರಚಿಸಿದ ವಚನಗಳನ್ನು ಹಾಡಿದರು.