ಹರಪನಹಳ್ಳಿ, ಮೇ 2- ತುರ್ತು ಸೇವೆಗಾಗಿ ತಮ್ಮಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು 112ಕ್ಕೆ ಇ.ಆರ್.ಎಸ್.ಎಸ್.ಗೆ ಕರೆ ಮಾಡಿ ಎಂದು ಡಿವೈಎಸ್ಪಿ ಹಾಲುಮೂರ್ತಿರಾವ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ 112 ಇ.ಆರ್.ಎಸ್.ಎಸ್ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ ವಾಹನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಸರಗಳ್ಳತನ, ಜಗಳ, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ಹಾಗೂ ಇನ್ನಿತರೆ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ 112 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
ಸಿಪಿಐ ನಾಗರಾಜ್ ಕಮ್ಮಾರ ಮಾತನಾಡಿ, ಪೊಲೀಸ್, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ನೆರವು ಸೇರಿದಂತೆ ಯಾವುದೇ ತುರ್ತು ಸಂದರ್ಭ ದಲ್ಲಿ ನೂತನವಾದ 112 ಸಹಾಯವಾಣಿಗೆ ಕರೆ ಮಾಡಿದರೆ ತುರ್ತಾಗಿ ಆ ಸ್ಥಳಕ್ಕೆ ಧಾವಿಸಿ ರಕ್ಷಣೆ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಿಎಸ್ಐ ಪ್ರಕಾಶ್ ಮಾತನಾಡಿ, ತುರ್ತು ಸ್ಪಂದನೆಗೆ 112ಕ್ಕೆ ಕರೆ ಮಾಡಿ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 100ರ ಬದಲು 112ಕ್ಕೆ ಕರೆ ಮಾಡಿದಲ್ಲಿ ಅವಶ್ಯಕತೆ ಇರುವ ಸ್ಥಳಕ್ಕೆ ಅತೀ ಸಮೀಪ ಇರುವ ಇ.ಆರ್.ಎಸ್.ಎಸ್ ವಾಹನವು ಸ್ಥಳಕ್ಕೆ ಬಂದು ಅಗತ್ಯ ಸೇವೆಯನ್ನು ಸಲ್ಲಿಸಲಿದೆ ಎಂದು ತಿಳಿಸಿದರು.
ಈ ವೇಳೆ ಹಲವಾಗಲು ಠಾಣೆಯ ಪಿಎಸ್ಐ ಪ್ರಶಾಂತ್, ಗುರುರಾಜ್, ಎಎಸ್ಐ ಎ. ಹನು ಮಂತಪ್ಪ ಸಿಬ್ಬಂದಿಗಳಾದ ಕೂಲಹಳ್ಳಿ ಕೊಟ್ರೇಶ್, ಜಗದೀಶ್, ಎಸ್.ಜಿ.ಚಂದ್ರು, ಜಾತಪ್ಪ, ವಸಂತನಾಯ್ಕ ಸೇರಿದಂತೆ, ಮತ್ತಿತರರಿದ್ದರು.