ಕಾನೂನಾತ್ಮಕ ನಿರ್ವಹಣೆಯಿಂದ ವ್ಯವಹಾರದಿಂದ ವೃದ್ಧಿ

ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್ ಗೌಡ

ದಾವಣಗೆರೆ, ಮಾ. 4 – ಕಾನೂನಾತ್ಮಕವಾಗಿ ವ್ಯವಹಾರ ನಿರ್ವಹಿಸಿದರೆ ಯಾವುದೇ ತೊಂದರೆ ಬಾರದ ಜೊತೆಗೆ ವ್ಯವಹಾರ ವೃದ್ಧಿಯಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ (ಆಡಳಿತ) ಆರ್.ಟಿ ರಮೇಶ್ ಗೌಡ ಹೇಳಿದ್ದಾರೆ.

ಜಿಲ್ಲಾ ಪುಸ್ತಕ ಮತ್ತು ಸ್ಟೇಷನರಿ ಮಾರಾಟಗಾರರ ಸಂಘದ ವತಿಯಿಂದ ನಗರದ ವಾಣಿಜ್ಯ ತೆರಿಗೆ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿ.ಎಸ್.ಟಿ. ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ವರ್ತಕರು ತಮ್ಮ ಬಳಿ ಬಂದಾಗ, ಬೇರೆಯವರು ಜಿ.ಎಸ್.ಟಿ. ನೋಂದಣಿ ಮಾಡಿಸದೇ ವ್ಯವಹರಿಸುತ್ತಿದ್ದಾರೆ, ದಾಖಲೆ ನಿರ್ವಹಿಸುತ್ತಿಲ್ಲ ಎಂದು ದೂರಿರುವುದನ್ನು ಕೇಳಿದ್ದೇನೆ. ಆದರೆ, ಬೇರೆಯವರ ಬಗ್ಗೆ ಯೋಚಿಸಲು ಹೋಗಬೇಡಿ. ಕಳ್ಳತನ ಮಾಡಿದವರು ಯಾವಾಗಲೇ ಆಗಲಿ ತೊಂದರೆ ಎದುರಿಸುವುದು ತಪ್ಪುವುದಿಲ್ಲ ಎಂದವರು ಹೇಳಿದರು.

ಜಿ.ಎಸ್.ಟಿ. ಹೊಸ ವ್ಯವಸ್ಥೆಯಾಗಿದೆ ಹಾಗೂ ಆಗಾಗ ಬದಲಾವಣೆಯೂ ಆಗುತ್ತಿರುತ್ತದೆ. ಹೀಗಾಗಿ ಈ ಬಗ್ಗೆ ತಿಳುವಳಿಕೆ ಹೊಂದುವ ಅಗತ್ಯವಿದೆ. ವರ್ತಕರಿಗೆ ಮಾಹಿತಿಯ ಅಗತ್ಯವಿದ್ದಲ್ಲಿ ಒದಗಿಸಲು ಇಲಾಖೆ ಕ್ರಮ ತೆಗೆದುಕೊಳ್ಳುತ್ತಿದೆ ಎಂದವರು ತಿಳಿಸಿದರು.

ವಾಣಿಜ್ಯ ತೆರಿಗೆ ಉಪ ಆಯುಕ್ತ (ಆಂತರಿಕ ಲೆಕ್ಕಪತ್ರ ಮತ್ತು ತನಿಖೆ) ಪಿ. ಪರಮೇಶ್ವರ ಗೌಡ ಮಾತನಾಡಿ, ಜಿ.ಎಸ್.ಟಿ.ಯ ಕಾಂಪೊಸಿಷನ್ ಯೋಜನೆ ಸರಳವಾಗಿದೆ. ಈ ಯೋಜನೆ ಅಳವಡಿಸಿಕೊಳ್ಳಲು ಬಯಸುವವರಿಗೆ ಮಾರ್ಚ್ 31 ಕೊನೆಯ ದಿನವಾಗಿದೆ. ಅಗತ್ಯ ಮಾಹಿತಿಯನ್ನು ಪಡೆದು, ವರ್ತಕರು ತಮಗೆ ಅನುಕೂಲವೆನಿಸಿದರೆ ಈ ಯೋಜನೆ ಬಳಸಿಕೊಳ್ಳಬಹುದು ಎಂದರು.

ಸಭೆಯಲ್ಲಿ ಜಿಲ್ಲಾ ಪುಸ್ತಕ ಮತ್ತು ಸ್ಟೇಷನರಿ ಮಾರಾಟಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ, ಗೌರವಾಧ್ಯಕ್ಷ ರಾಘವೇಂದ್ರ, ಹಗರಿಬೊಮ್ಮನಹಳ್ಳಿಯ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಆರ್.ವಿ. ನಟರಾಜ್, ಕೊಪ್ಪಳದ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಡಾ. ಕೆ.ಹೆಚ್. ನಿತಿನ್ ಉಪಸ್ಥಿತರಿದ್ದರು.

ರಮೇಶ್ ನಾಯ್ಕ ಪ್ರಾರ್ಥಿಸಿದರೆ, ರೇವಣಸಿದ್ದಯ್ಯ ಸ್ವಾಗತಿಸಿದರು. ಎಸ್.ಟಿ. ವಿಜಯೇಂದ್ರ ನಿರೂಪಿಸಿದರೆ, ಮಹೇಂದ್ರ ಕುಮಾರ್ ವಂದಿಸಿದರು.

error: Content is protected !!