ಹರಿಹರ, ಮಾ.4- ಜಗತ್ತಿನಲ್ಲಿ ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಇರಬೇಕಾಗಿದ್ದ ಭಾವೈಕ್ಯತೆಯು ಮಾಯವಾಗಿ ಬೇರೆ ಕಡೆ ಅಂದರೆ ಸಿನಿಮಾ-ಮಂದಿರ, ಹೋಟೆಲ್, ಬಾರ್ ಗಳಲ್ಲಿ ಕಾಣುತ್ತಿದೆ ಎಂದು ಗಾಣಿಗ ಗುರುಪೀಠ, ವಿಜಯಪುರ ಹೇಮ ವೇಮ ಸದ್ಭಾವನಾ ವಿದ್ಯಾಪೀಠದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ತಾಲ್ಲೂಕು ಕ್ರೀಡಾಂಗಣ (ಗಾಂಧಿ ಮೈದಾನ)ದಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ , ಶ್ರೀ ಮಹಾಯೋಗಿ ವೇಮನ ಪಿ.ಯು ಕಾಲೇಜ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಹರಿಹರ ತಾಲ್ಲೂಕು ಮಟ್ಟದ ಪಿ.ಯು. ಕಾಲೇಜುಗಳ ಕ್ರೀಡಾಕೂಟದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಭಾವೈಕ್ಯತೆ ದೊರೆಯುವ ಮತ್ತೊಂದು ಸ್ಥಳ ಎಂದರೆ ಕ್ರೀಡಾಕೂಟಗಳು. ಇಂದು ನೀವೆಲ್ಲರೂ ಸಂತೋಷವಾಗಿ, ಸ್ವಚ್ಛಂದವಾಗಿ ಕ್ರೀಡಾಕೂಟ ದಲ್ಲಿ ಭಾಗಿಯಾಗಿದ್ದೀರಿ. ಉತ್ತಮ ಪ್ರತಿಭೆಯನ್ನು ತೋರಿಸಿ ಉನ್ನತ ಮಟ್ಟದಲ್ಲಿ ಜಯ ಗಳಿಸಿ ಉತ್ಸಾ ಹದಿಂದ ಭಾಗಿಯಾಗಿರಿ ಎಂದು ಹರಿಸಿದರು.
ಕ್ರೀಡಾ ಜ್ಯೋತಿ ಬೆಳಗಿಸಿ, ಕ್ರೀಡೆಯನ್ನು ಉದ್ಘಾಟಿಸಿದ ಶಾಸಕ ಎಸ್.ರಾಮಪ್ಪ ಮಾತನಾಡಿ, ನಾವು-ನೀವೆಲ್ಲರೂ ಯಾವುದೇ ವಯಸ್ಸಿ ನವರಾಗಿದ್ದರೂ ಪ್ರತಿದಿನ 30 ನಿಮಿಷಗಳ ಕಾಲ ಓಟದ, ವಯಸ್ಸಾದವರಾದರೆ ನಡಿಗೆಯ ಅಭ್ಯಾ ಸವನ್ನು ಮಾಡಿಕೊಂಡರೆ ನಮ್ಮ ಆರೋಗ್ಯದಲ್ಲಿ ಉತ್ಸಾಹ, ಚೈತನ್ಯ ತುಂಬುತ್ತದೆ ಎಂದರು.
ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಇಂದು ನಡೆಯುತ್ತಿರುವ ಆಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆ ಮಾಡುವುದು ಬಹಳ ಮುಖ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂದರು. ಇತ್ತೀ ಚೆಗೆ ನಮ್ಮ ಹರಿಹರ ಉತ್ತಮ ಕ್ರೀಡಾ ಪಟುಗಳನ್ನು ಹುಟ್ಟಿ ಹಾಕುತ್ತಿದೆ. ಅವರೆಲ್ಲರಿಗೂ ಶುಭ ಹಾರೈಸುತ್ತೇನೆ ಎಂದು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ನಾಗರಾಜಪ್ಪ ಮಾತನಾಡಿ, ಕೋವಿಡ್-19 ಕಾರಣಕ್ಕಾಗಿ ಜಡ್ಡುಗಟ್ಟಿದ್ದ ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರದ ಆದೇಶದ ಮೇರೆಗೆ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಕ್ರೀಡಾಪಟುಗಳು ಸಿಬ್ಬಂದಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರದ ನೀತಿ ನಿಯಮಗಳಂತೆ ಕ್ರೀಡೆ ನಡೆಸಬೇಕು ಎಂದು ಸೂಚಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಹೆಚ್.ಪಿ. ಸುಭಾಷ್, ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ನಗರಸಭಾ ಪೌರಾಯುಕ್ತ ಉದಯ್ ಕುಮಾರ್ ತಳವಾರ್, ಗ್ರಾಮಾಂತರ ಪಿಎಸ್ಐ ಡಿ. ರವಿಕುಮಾರ್, ಕಾಲೇಜು ಶೈಕ್ಷಣಿಕ ಸಲಹೆಗಾರ ಬಿ.ವಿ. ಅಶೋಕ್ ರಾಜ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಿ.ಯು. ಕಾಲೇಜಿನ ಶೈಕ್ಷಣಿಕ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಕ್ರೀಡೆಯ ಮೇಲುಸ್ತುವಾರಿ ಮತ್ತು ಪ್ರತಿಜ್ಞಾ ವಿಧಿ ಬೋಧನೆಯನ್ನು ಸಂತ ಅಲೋಷಿಯಸ್ ಕಾಲೇಜಿನ ದೈಹಿಕ ನಿರ್ದೇಶಕ ಟಿ.ಎಸ್.ಮಂಜುನಾಥ್ ನಡೆಸಿಕೊಟ್ಟರು. ಪ್ರಾಂಶುಪಾಲರಾದ ಬಿ.ಎಂ. ಕುಂಜುರಾಣಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರೇವಣಪ್ಪ ಸ್ವಾಗತಿಸಿದರು. ಬಸವರಾಜ್ ನಿರೂಪಿಸಿದರು.