ಕೂಡ್ಲಿಗಿ : ಕೋವಿಡ್‌ ಬೆಡ್‌ 21 ರಿಂದ 32 ಕ್ಕೆ ಹೆಚ್ಚಳ

ಕೂಡ್ಲಿಗಿ, ಮೇ 2- ತಾಲ್ಲೂಕಿನಲ್ಲಿ ಕೋವಿಡ್ ಪಾಸಿಟಿವ್ ವರದಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಂಜಾಗ್ರತೆಯಾಗಿ ಕೋವಿಡ್ ಬೆಡ್‌ಗಳನ್ನು 21 ರಿಂದ 32ಕ್ಕೆ ಹೆಚ್ಚಿಸಲಾಗಿದೆ.ಆಕ್ಸಿಜನ್ ತೊಂದರೆಯಾಗದಂತೆ ಕೂಡ್ಲಿಗಿ ಆಸ್ಪತ್ರೆ ಆವರಣದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದು, ಸದ್ಯದಲ್ಲೇ ಆಕ್ಸಿಜನ್ ಯುನಿಟ್ ತಯಾರಿಕಾ ಘಟಕ ಸಹ ಪ್ರಾರಂಭವಾಗಲಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ತಿಳಿಸಿದರು.

ಅವರು ಭಾನುವಾರ ಪತ್ರಿಕೆಯೊಂದಿಗೆ  ಮಾತನಾಡುತ್ತಾ,  ಈ ಹಿಂದೆ 21 ಕೋವಿಡ್ ಬೆಡ್ ನಿರ್ಮಿಸಲಾಗಿತ್ತು. ಎರಡನೇ ಅಲೆ ಜೋರಾಗುತ್ತಿರುವ ಪರಿಣಾಮವಾಗಿ ಶಾಸಕ ಎನ್.ವೈ. ಗೋಪಾಲಕೃಷ್ಣ, ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಕಾಳಜಿಯಿಂದ ಕೋವಿಡ್ ಬೆಡ್‌ಗಳನ್ನು ಹೆಚ್ಚಿಸಲಾಗಿದೆ ಎಂದರು.  

ತಾಲ್ಲೂಕಿನ ಕೊರೊನಾ ರೋಗಿಗಳಿಗೆ ತೊಂದರೆಯಾಗದಂತೆ ಈ ಹಿಂದೆ ಇದ್ದ ಜನರಲ್ ರೋಗಿಗಳಿಗೆ ಬಳಸಲಾಗುತ್ತಿದ್ದ ವಾರ್ಡನ್ನು ಕೋವಿಡ್ ವಾರ್ಡ್‌ಗೆ  ಬಳಸಿಕೊಂಡು ಮೇಲ್ಮಹಡಿಯಲ್ಲಿ ಜನರಲ್ ವಾರ್ಡ್ ತೆಗೆದಿರುವುದಾಗಿ ತಿಳಿಸಿದರು.

ಕೋವಿಡ್ ವಾರ್ಡ್‌ನ 32 ನಾರ್ಮಲ್ ಬೆಡ್‌ನಲ್ಲಿ 7 ಐಸಿಯು, 6 ವೆಂಟಿಲೇಟರ್ ಬೆಡ್‌ಗಳಿವೆ,  ಕೂಡ್ಲಿಗಿ ಆಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ಈಗ 26 ಪಾಸಿಟಿವ್ ಪ್ರಕರಣಗಳಿದ್ದು, ಅದರಲ್ಲಿ 12 ಕೋವಿಡ್ ರೋಗಿಗಳು ಆಕ್ಸಿಜನ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಈ ಸಂಬಂಧವಾಗಿ ಆಸ್ಪತ್ರೆಗೆ ಹೆಚ್ಚುವರಿ ಸಿಬ್ಬಂದಿ ಅವಶ್ಯಕವಾಗಿದ್ದು, ಸದ್ಯದಲ್ಲೇ ಈ ಸಿಬ್ಬಂದಿ ನೇಮಕದ ಬಗ್ಗೆ ತಾಲ್ಲೂಕು ಆಡಳಿತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ  ಎಂದು ತಿಳಿಸಿದರು. 

ಸದ್ಯದಲ್ಲೇ ಕೂಡ್ಲಿಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪನೆ : ಕೊರೊನಾ ಪೀಡಿತರು ಉಸಿರಾಟದ ತೊಂದರೆಯಿಂದ ಬಳಲಿ ಪ್ರಾಣ ಹೋಗಬಾರದೆಂಬ ನಿಟ್ಟಿನಲ್ಲಿ ಶಾಸಕರು ಮತ್ತು ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ಮನಗಂಡು ಈಗಾಗಲೇ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಸದ್ಯದಲ್ಲೇ ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪನೆಯಾಗಲಿದ್ದು, ಯಾವ ರೋಗಿಯೂ ಉಸಿರಾಟದ ತೊಂದರೆಯಿಂದ ಬಳಲದಂತೆ ಪ್ರಾಣ ರಕ್ಷಣೆ ಮಾಡುವಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಡಾ.ವಿನಯ್ ಹೇಳಿದರು.

error: Content is protected !!