ನಿಗದಿತ ಸಮಯಕ್ಕೆ ವ್ಯಾಪಾರ, ವಹಿವಾಟು ಸ್ಥಗಿತ

ಹರಿಹರ, ಏ.28- ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 10 ಗಂಟೆಯಿಂದ ಸ್ಥಗಿತಗೊಳಿಸುವಂತೆ ಆದೇಶವನ್ನು ನೀಡಿದ್ದರಿಂದ ನಗರದ ಎಲ್ಲಾ ವ್ಯಾಪಾರ, ವಹಿವಾಟುಗಳನ್ನು 10 ಗಂಟೆಗೆ ಸ್ಥಗಿತಗೊಳಿಸಲಾಯಿತು.

ವಾಹನಗಳ ಸಂಚಾರ ಇರಲಿಲ್ಲ. ಮುಖ್ಯ ರಸ್ತೆ, ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ತರಕಾರಿ ಮಾರುಕಟ್ಟೆ, ಹೆಚ್. ಶಿವಪ್ಪ ವೃತ್ತ, ಹಳೆ ಪಿಬಿ ರಸ್ತೆ, ಹರಪನಹಳ್ಳಿ ರಸ್ತೆ, ಹೈಸ್ಕೂಲ್ ಬಡಾವಣೆ, ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆಯಲ್ಲಿ ಜನ ಸಂದಣಿ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬ್ಯಾಂಕ್ ವ್ಯವಹಾರ ಮಧ್ಯಾಹ್ನ 2 ರವರೆಗೆ ನಡೆದರೆ, ಸರ್ಕಾರಿ ಕಾರ್ಯಾಲಯಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಔಷಧಿ, ಪೆಟ್ರೋಲ್ ಬಂಕ್, ಆಸ್ಪತ್ರೆಗಳು ಕಾರ್ಯನಿರ್ವಹಿಸಿದವು.

ನಗರದಲ್ಲಿ ಕೊರೊನಾ ಹರಡದಂತೆ ತಡೆಗಟ್ಟಲು ನಗರಸಭೆ ಸಭಾಂಗಣದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮೀ, ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್, ಸಿಪಿಐ ಸತೀಶ್ ಕುಮಾರ್ ಇವರು ತರಕಾರಿ ಮತ್ತು ಹಣ್ಣಿನ ವ್ಯಾಪಾರಿಗಳ ಸಭೆ ಮಾಡಿದರು. ಸಭೆಯಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ತಮಗೆ ವ್ಯಾಪಾರ ಮಾಡುವುದಕ್ಕೆ ಹೆಚ್ಚಿನ ಸಮಯ ನೀಡಿ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಅಧಿಕಾರಿಗಳು ಇದು ಸರ್ಕಾರದ ಆದೇಶ ವಾಗಿದ್ದು, ಬದಲಿಸಲು ಸಾಧ್ಯವಿಲ್ಲ ಎಂದರು.

ನಗರದಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಓಡಾಡುವ ಸಾರ್ವ ಜನಿಕರಿಗೆ ಮತ್ತು ವಾಹನ ಸವಾರರಿಗೆ ನಗರ ಠಾಣೆಯ ಪಿಎಸ್ಐ ಸುನಿಲ್ ಬಸವರಾಜ್ ತೆಲಿ ದಂಡವನ್ನು ವಿಧಿಸಿ, ಎಚ್ಚರಿಕೆ ನೀಡಿದರು. 

error: Content is protected !!