ಹರಪನಹಳ್ಳಿ, ಏ.28- ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಕರೆ ನೀಡಿದ 14 ದಿನಗಳ ಜನತಾ ಕರ್ಫ್ಯೂಗೆ ಮೊದಲ ದಿನ ಹರಪನಹಳ್ಳಿ ತಾಲ್ಲೂಕಿನ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇಡೀ ಪಟ್ಟಣ ಸ್ತಬ್ಧವಾಗಿತ್ತು.
ಆಸ್ಪತ್ರೆ, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ಸಂತೆ ಪೇಟೆ ಬೀದಿ ಬದಿಯ ತರಕಾರಿ, ಹೂವು, ಹಣ್ಣು, ಚಿಕ್ಕಪುಟ್ಟ ಚಹಾ ಪಾಯಿಂಟ್ಗಳು, ಪಾನ್ ಬೀಡಾ ಅಂಗಡಿಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು, ದಿನಸಿ ಅಂಗಡಿಗಳು, ಹೋಟೆಲ್ಗಳು, ಬೇಕರಿಗಳು, ಕಟ್ಟಿಂಗ್ ಶಾಪ್ಗಳು, ಬಟ್ಟೆ, ಬಂಗಾರದ ಅಂಗಡಿಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿಯೇ ಮುಚ್ಚಿ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದರು.
ಪಟ್ಟಣದಲ್ಲಿ ಬಸ್, ಆಟೋ, ಕಾರ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಬಸ್ ನಿಲ್ದಾಣ ಸೇರಿದಂತೆ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಕೊರೊನಾ ವೈರಸ್ ತಡೆಗೆ ತಾಲ್ಲೂಕು ಉಪವಿಭಾ ಗಾಧಿಕಾರಿ ಚಂದ್ರಶೇಖರಯ್ಯ, ಡಿವೈಎಸ್ಪಿ ಹಾಲಮೂರ್ತಿ ರಾವ್, ತಹಶೀಲ್ದಾರ್ ಎಂ.ಎಲ್. ನಂದೀಶ್, ವೃತ್ತ ನಿರೀಕ್ಷಕ ನಾಗರಾಜ್ ಎಂ. ಕಮ್ಮಾರ್, ಪಿಎಸ್ಐ ಸಿ. ಪ್ರಕಾಶ್, ಆರೋಗ್ಯಾಧಿಕಾರಿ ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜ್ ನಾಯ್ಕ್, ತಾಲ್ಲೂಕು ಆಡಳಿತ ನೇತೃತ್ವದ ತಂಡಗಳು ತಾಲ್ಲೂಕಿನಾ ದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದ್ದು, ಎತ್ತ ನೋಡಿದರತ್ತ ಖಾಕಿ ಪಡೆಯ ಕಣ್ಗಾವಲು ಎದ್ದು ಕಾಣುತ್ತಿತ್ತು.