ಹರಪನಹಳ್ಳಿ, ಮಾ.2- ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾದ ಲಿಂಗೈಕ್ಯ ಚಂದ್ರಮೌಳೀಶ್ವರ ಸ್ವಾಮೀಜಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಸಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಹೇಳಿದರು.
ಪಟ್ಟಣದ ಟಿಎಂಎಇ ಸಂಸ್ಥೆ ಕಟ್ಟಿದ ಸೇತುರಾಮಚಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಸಮಾರೋಪ ಮತ್ತು ದೀಪದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೌರವ ಡಾಕ್ಟರೇಟ್ ವಿಷಯವನ್ನು ವಿಶ್ವವಿದ್ಯಾ ಲಯದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮೈಗೂಡಿಸಿ ಕೊಳ್ಳಬೇಕು. ಕಠಿಣ ಪರಿಶ್ರಮ, ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಉನ್ನತ ಗುರಿ ತಲುಪಬಹುದು. ಗ್ರಾಮಾಂತರ ಪ್ರದೇಶದಲ್ಲಿ ತೆಗ್ಗಿನಮಠ ಸಂಸ್ಥಾನ ಶಿಕ್ಷಣ ಕ್ರಾಂತಿ ಮಾಡಿದೆ ಎಂದರು.
ತೆಗ್ಗಿನಮಠ ಸಂಸ್ಥಾನದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮುಂದೆ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು, ಸಮಯ ಪ್ರಜ್ಞೆ, ಶಿಸ್ತು, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಿದರೆ, ಸಮಾಜವು ಸದೃಢವಾಗುತ್ತದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಪ್ರಾಂಶುಪಾಲ ಟಿ.ಎಂ. ರಾಜಶೇಖರ ಮಾತನಾಡಿ, 1970ರ ದಶಕದಲ್ಲಿ ತತ್ವಶಾಸ್ತ್ರ ಉಪನ್ಯಾಸಕರಾಗಿದ್ದ ಲಿಂಗೈಕ್ಯ ಚಂದ್ರಮೌಳೀಶ್ವರ ಸ್ವಾಮೀಜಿ ಈ ಭಾಗದಲ್ಲಿ ವಿದ್ಯಾಸಂಸ್ಥೆಗಳನ್ನು ತೆರೆದು ನೆರವಾಗಿದ್ದಾರೆ. ಹೊರರಾಜ್ಯ ಹಾಗೂ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬರದ ನಾಡಲ್ಲಿ ಅಕ್ಷರ ಕ್ರಾಂತಿ ಮಾಡಿದ ಪೂಜ್ಯರಿಗೆ ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ ನೀಡಬೇಕು ಎಂದು ಕುಲಪತಿಗೆ ಮನವಿ ಮಾಡಿದರು.
ಎಸ್.ಇ.ಎಸ್. ಫಾರ್ಮಸಿ ಕಾಲೇಜು ಪ್ರಾಚಾರ್ಯ ನಾರಾಯಣರಾವ್, ಸಹಾಯಕ ಪ್ರಾಧ್ಯಾಪಕ ಟಿ.ಎಚ್. ಗಿರೀಶ್ ದೀಪದಾನ ಕಾರ್ಯಕ್ರಮದ ಪ್ರತಿಜ್ಞಾ ವಿಧಿ ಬೋಧಿಸಿದರು. ನಾಡೋಜ ಡಾ. ಮಹೇಶ್ ಜೋಷಿ, ಸಹಾಯಕ ಪ್ರಾಧ್ಯಾಪಕರಾದ ಎನ್.ಟಿ. ಮರಳುಸಿದ್ದಪ್ಪ, ಡಾ. ಸಿ.ಎಂ. ವೀರೇಶ್, ಪ್ರಶಿಕ್ಷಣಾರ್ಥಿಗಳಾದ ಡಿ.ಎನ್. ರಾಜಶೇಖರ, ಸಿ.ಜೆ. ಅಕ್ಷತಾ, ಎಂ.ಉಮೇಶ್, ಕೆ.ಎಂ. ಮೇಘನಾ, ಎಚ್. ಪ್ರಶಾಂತ್, ಜೆ. ಕಾವ್ಯ ಸೇರಿದಂತೆ ಇನ್ನಿತರರಿದ್ದರು.