ಮಲೇಬೆನ್ನೂರು, ಏ.28- ಕೊರೊನಾ 2ನೇ ಅಲೆ ವ್ಯಾಪಿಸದಂತೆ ತಡೆಯಲು ರಾಜ್ಯ ಸರ್ಕಾರ ಹೇರಿರುವ 14 ದಿನಗಳ ಲಾಕ್‌ಡೌನ್ ಪ್ರಾರಂಭವಾದ ಮೊದಲ ದಿನ ಮಲೇಬೆನ್ನೂರು ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.
ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವುದರಿಂದ ಜನರು ಆ ವೇಳೆಯಲ್ಲಿ ಸಮಾಧಾನವಾಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಬೆಳಿಗ್ಗೆ 10 ಗಂಟೆಯ ನಂತರ ವರ್ತಕರು ಅಂಗಡಿ – ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ, ಕರ್ಫ್ಯೂಗೆ ಬೆಂಬಲ ನೀಡಿದರು.
ಪೆಟ್ರೋಲ್ ಬಂಕ್, ಆಸ್ಪತ್ರೆ, ಮೆಡಿಕಲ್ ಷಾಪ್‌ಗಳು ಮಾತ್ರ ದಿನವಿಡೀ ತೆರೆದಿದ್ದವು.ವಿನಾಕಾರಣ ರಸ್ತೆಗೆ ಬಂದವರಿಗೆ ಪೊಲೀಸರು ಎಚ್ಚರಿಕೆ ನೀಡಿ, ಮನೆಗೆ ಕಳುಹಿಸಿದರು. ವಾಹನಗಳ ಓಡಾಟ ಕಡಿಮೆ ಇತ್ತು.
ಅಧಿಕಾರಿಗಳ ದಾಳಿ : ಉಪತಹಶೀಲ್ದಾರ್ ಆರ್.ರವಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಬಾಗಿಲು ಹಾಕಿಕೊಂಡು ಒಳಗಡೆ ವ್ಯಾಪಾರ ಮಾಡುತ್ತಿದ್ದ ಕೆಲವು ಅಂಗಡಿಗಳ ಮೇಲೆ ದಾಳಿ ಮಾಡಿ ಖಡಕ್ ಎಚ್ಚರಿಕೆ ನೀಡಿ, ಬೀಗ ಹಾಕಿ ದರು. ನಂತರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಜನರಿಗೂ ಲಾಕ್‌ಡೌನ್ ಬಗ್ಗೆ ಅರಿವು ಮೂಡಿ ಸಿದರು. ಕೆಲವರಿಗೆ ದಂಡವನ್ನೂ ಹಾಕಲಾಯಿತು.
ಕಳೆದ ವರ್ಷಕ್ಕೆ ಹೊಲಿಸಿದರೆ, ಈ ವರ್ಷ ಲಾಕ್‌ಡೌನ್‌ಗೆ ಜನರು ಉತ್ತಮ ಸ್ಪಂದನೆ ನೀಡಿದ್ದಾರೆ. ನಾಳೆಯಿಂದ ಲಾಕ್‌ಡೌನ್ ಇನ್ನೂ ಬಿಗಿಗೊಳ್ಳಲಿದೆ ಎಂದು ಉಪತಹಶೀಲ್ದಾರ್ ರವಿ ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ, ಸದಸ್ಯ ಬಿ.ಸುರೇಶ್, ಪಿಎಸ್‌ಐ ವೀರಬಸಪ್ಪ, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನವೀನ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.
ಒಬ್ಬರಿಗೆ ಪಾಸಿಟಿವ್ : ಪಟ್ಟಣದಲ್ಲಿ ಬುಧವಾರ 40 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಂಗಳವಾರ ಕೊಮಾರನಹಳ್ಳಿ ಗ್ರಾಮದ ಒಂದೇ ಕುಟುಂಬದ ನಾಲ್ವರಿಗೆ ಪಾಸಿಟಿವ್ ಬಂದಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ತಿಳಿಸಿದರು.
ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಒಬ್ಬರಿಗೂ ಪಾಸಿಟಿವ್ ಬಂದಿರುವುದು ಸೇರಿ ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿದೆ. ಸೋಂಕಿತರನ್ನು ಹರಿಹರ ಮತ್ತು ದಾವಣಗೆರೆ ಆಸ್ಪತ್ರೆಗಳಿಗೆ ಕಳುಹಿಸಿ ಕೊಡಲಾಗಿದೆ ಎಂದು ಹೇಳಲಾಗಿದೆ.
ಆಗಮನ : ಸರ್ಕಾರ 14 ದಿನಗಳ ಲಾಕ್‌ಡೌನ್ ಜಾರಿಗೊಳಿಸಿದ ಬೆನ್ನ ಹಿಂದೆಯೇ ಬೆಂಗಳೂರು ಸೇರಿದಂತೆ ಪರ ಊರುಗಳಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ ಅನೇಕರು ತಮ್ಮ ತಮ್ಮ ಹಳ್ಳಿಗಳಿಗೆ ಮಂಗಳವಾರ ರಾತ್ರಿ ಆಗಮಿಸಿದ್ದಾರೆ. ಬೇರೆ ಊರುಗಳಿಂದ ಆಗಮಿಸಿರುವವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸ ಲಾಗುವುದೆಂದು ಜಿಗಳಿ ಗ್ರಾ.ಪಂ ಪಿಡಿಒ ದಾಸರ ರವಿ ತಿಳಿಸಿದ್ದಾರೆ.
ಮಲೇಬೆನ್ನೂರು ಪಟ್ಟಣಕ್ಕೆ ಬೇರೆ ಊರುಗಳಿಂದ ಬಂದಿರುವವರ ಮಾಹಿತಿ ಇನ್ನೂ ಸಿಕ್ಕಿಲ್ಲ. ಬುಧವಾರ ಅಂತಹವರನ್ನು ಪತ್ತೆ ಹಚ್ಚಿ, ಆರೋಗ್ಯ ಪರೀಕ್ಷೆ ಮಾಡಿ, ಹೋಂ ಕ್ವಾರಂಟೈನ್ ಮಾಡಲಾಗುವುದೆಂದು ವೈದ್ಯಾಧಿ ಕಾರಿ ಡಾ.ಲಕ್ಷ್ಮಿದೇವಿ ಮಾಹಿತಿ ನೀಡಿದರು.