ರಾಣೇಬೆನ್ನೂರು, ಜು.20- ತಾಲ್ಲೂಕಿನಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದ್ದರಿಂದ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ. ಅಗತ್ಯವಿರುವಷ್ಟು ಗೊಬ್ಬರ ಗುರುವಾರ ಬರಲಿದೆ. ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗುವುದಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ ಹೇಳಿದರು.
ಯೂರಿಯಾ ಗೊಬ್ಬರ ಕೊರತೆಯಾಗಿಲ್ಲ. ಹಲಗೇರಿ ಮತ್ತು ಬೆನಕನಕೊಂಡ ಭಾಗದಲ್ಲಿ ದೂರುಗಳು ಬಂದಿದ್ದರೂ ಸಹ ರೈತರಿಗೆ ತೊಂದರೆ ಆಗದಂತೆ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಉಳಿದಂತೆ ತಾಲ್ಲೂಕಿನಲ್ಲಿ ಯಾವುದೇ ದೂರುಗಳಿಲ್ಲ ಎಂದು ಅವರು ಹೇಳಿದರು.
ಇಂದು ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆಯ ಪ್ರಗತಿ ವಿವರಿಸುತ್ತಿದ್ದ ಅವರು ಈ ಬಾರಿ 42,661 ಹೆಕ್ಟೇರ್ ಗೋವಿನಜೋಳ ಬಿತ್ತನೆ ಆಗಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಗೋವಿನಜೋಳ 4 ಸಾವಿರ ಹೆಕ್ಟೇರ್ನಷ್ಟು ಹೆಚ್ಚು ಬಿತ್ತನೆ ಆಗಿದೆ ಎಂದರು.
ವ್ಯಾಕ್ಸಿನ್: ಈಗಾಗಲೇ 62 ಸಾವಿರ ನಾಗರಿಕರಿಗೆ ಮೊದಲನೆ ಡೋಸ್, 13 ಸಾವಿರ ಜನರಿಗೆ ಎರಡನೆ ಡೋಸ್, 7,400 ವಿದ್ಯಾರ್ಥಿ ಗಳು, ಪ್ರಾಧ್ಯಾಪಕರು ಹಾಗೂ ಇತರೆ ಸಿಬ್ಬಂದಿಗೆ ವ್ಯಾಕ್ಸಿನ್ ಹಾಕಲಾಗಿದೆ. ಒಟ್ಟು ನಗರಕ್ಕೆ 3 ಲಕ್ಷ ಬೇಕಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಸಂತೋಷ್ ಆರೋಗ್ಯ ಇಲಾಖೆ ಪ್ರಗತಿ ವಿವರಿಸಿದರು.
ಶಾಸಕದ್ವಯರಾದ ಅರುಣಕುಮಾರ ಪೂಜಾರ ಹಾಗೂ ವಿರುಪಾಕ್ಷಪ್ಪ ಬಳ್ಳಾರಿ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ ಪಾಲ್ಗೊಂಡಿದ್ದರು. ಅಕ್ಷರ ದಾಸೋಹದ ಲಿಂಗರಾಜ ಸುತ್ತಕೋಟಿ ಸ್ವಾಗತಿಸಿದರು. ಮ್ಯಾನೇಜರ್ ಬಸವರಾಜ ಶಿಡೇನೂರ ವಂದಿಸಿದರು.