ಹರಪನಹಳ್ಳಿ, ಜು.20 – ತಾಲ್ಲೂಕಿನ ಅರಸಿಕೇರಿ ಹೋಬಳಿಯ ಉಚ್ಚಂಗಿದುರ್ಗ, ಚಟ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷ ಶಾಸಕ ಎಸ್.ವಿ. ರಾಮಚಂದ್ರಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಚಟ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರೆಮಾಗಾನಹಳ್ಳಿ, ಚಟ್ನಿಹಳ್ಳಿ, ನರೇಬೊಮ್ಮನಹಳ್ಳಿ, ರಾಮಘಟ್ಟ, ಫಣಿಯಾಪುರ, ಉಚ್ಚಂಗಿದುರ್ಗದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಹಾನಿಗೊಳಗಾದ ತೋಟಗಾರಿಕೆ ಫಸಲು ಹಾಗೂ ಇತರೆ ಬೆಳೆಗಳನ್ನು ಪರಿಶೀಲಿಸಿದರು. ಜತೆಗೆ ಸ್ಥಳದಲ್ಲೇ ಇದ್ದ ತಹಶೀಲ್ದಾರ್ ಎಲ್.ಎಂ.ನಂದೀಶ್ ಹಾಗೂ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೆಶಕ ಜಯಸಿಂಹ ಅವರಿಗೆ ಸಮೀಕ್ಷೆ ನಡೆಸಿ ಹಾನಿಯ ಅಂದಾಜು ಹಾಗೂ ಪ್ರಕೃತಿ ವಿಕೋಪ ಪರಿಹಾರ ಯೋಜನೆ ಅಡಿ ಪರಿಹಾರಕ್ಕಾಗಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಮಳೆಯಿಂದಾಗಿ ಮನೆ ಹಾಗೂ ಮೇಕೆಗಳನ್ನು ಕಳೆದು ಕೊಂಡ ಸಂತ್ರಸ್ತ ಮನೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಂತ್ವನದ ಧೈರ್ಯ ತುಂಬಿದ ಶಾಸಕರು ಬಳಿಕ ಎಲ್ಲಾ ಸಂತ್ರಸ್ತ ಕುಟುಂಬ ಗಳಿಗೂ ತಲಾ 10 ಸಾವಿರದಂತೆ ವೈಯಕ್ತಿಕ ಪರಿಹಾರವನ್ನು ಸ್ಥಳದಲ್ಲಿಯೇ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಫಾತೀಮಾ, ಇಂಜಿನಿಯರ್ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಅಭಿವೃದ್ದಿ ಅಧಿಕಾರಿ ಸಂಗಪ್ಪ, ಉಮೇಶ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಕೆಂಚನಗೌಡ, ಮುಖಂಡರಾದ ಚಟ್ನಿಹಳ್ಳಿ ರಾಜಪ್ಪ, ಫಣಿಯಾಪುರ ಲಿಂಗರಾಜ, ಅಜ್ಜಯ್ಯ, ಉಚ್ಚಂಗಿದುರ್ಗದ ರವಿಗೌಡ, ಎಸ್.ಹನುಮಂತಪ್ಪ, ಕಮ್ಮತ್ತಹಳ್ಳಿ ಸಿದ್ದಣ್ಣ ಸೇರಿದಂತೆ, ಇತರರು ಇದ್ದರು.