ಜನರನ್ನು ರೋಗ ಮುಕ್ತರನ್ನಾಗಿಸುವುದೇ ನಮ್ಮ ಧರ್ಮ

ಉಚ್ಚಂಗಿದುರ್ಗದಲ್ಲಿ ಶಾಸಕ ಎಸ್.ವಿ.ರಾಮಚಂದ್ರಪ್ಪ 

ಹರಪನಹಳ್ಳಿ, ಏ.27- ನಮ್ಮ ಜನರನ್ನು ರೋಗದಿಂದ ಉಳಿಸಿಕೊಳ್ಳುವ ಧರ್ಮ ನಮ್ಮದು, ಯಾವುದೇ ಕಾರಣಕ್ಕೂ ರೈತರು, ಕೂಲಿಕಾರ್ಮಿಕರು ಹಸಿವಿನಿಂದ ಸಾಯಬಾರದು. ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ ಎಂದು ಶಾಸಕ ಎಸ್.ವಿ. ರಾಮಚಂದ್ರಪ್ಪ ಸೂಚಿಸಿದರು.

ತಾಲ್ಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಚ್ಚಂಗಿದುರ್ಗ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೋವಿಡ್-19ರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಭಾಗದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ. ಮನೆಯಲ್ಲಿರುವ ಸದಸ್ಯರು ಇದರಿಂದ ದೂರವಿರಬೇಕು. ಹಿರಿಯರಿಗೆ ಸಂಕಷ್ಟದ ಕಾಲ ಲಾಕ್‍ಡೌನ್ ಆಗಿದೆ. ಜೀವ ಅಮೂಲ್ಯವಾಗಿದ್ದು ಯಾರಿಗೂ ಸಾವು, ನೋವು ಆಗದಂತೆ ಸರ್ಕಾರದಿಂದ ದೊರಕುವ  ಸೌಲಭ್ಯವನ್ನು ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.

ಪಿಡಿಓ, ಆರೋಗ್ಯ, ಆಶಾ ಕಾರ್ಯಕರ್ತರು, ಗ್ರಾ.ಪಂ. ಸಿಬ್ಬಂದಿಗಳು ಜಾಗ್ರತೆ ವಹಿಸಿರಿ. ಯಾರಿಗೆ ಯಾವಾಗ ಈ ರೋಗ ಬರುವುದೋ ಗೊತ್ತಿಲ್ಲ. ರೋಗದ ಬಗ್ಗೆ ಅಲಕ್ಷ್ಯ ಮಾಡದೆ ಎಚ್ಚರವಾಗಿರಬೇಕು ಎಂದರು. ಮಳೆಗಾಲ ಬಂದರೆ ಮತ್ತಷ್ಟು ಹೆಚ್ಚಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.

ಗ್ರಾ.ಪಂ. ಪಿಡಿಒಗಳು ಬಹಳ ಸೂಕ್ಷ್ಮವಾಗಿ ಕೆಲಸ ನಿರ್ವಹಿಸಬೇಕು. ರೋಗಿಯ ಮಾಹಿತಿ ಬಂದ ಕೂಡಲೇ ಅವರ ಬಗ್ಗೆ ನಿಗಾವಹಿಸಬೇಕು. ತಕ್ಷಣ ನಮಗಾಗಲೀ, ತಹಶೀಲ್ದಾರರ ಗಮನಕ್ಕೆ ತರಬೇಕು ಎಂದು ಹೇಳಿದ ಅವರು ಟಿಹೆಚ್‌ಒ ವೆಂಕಟೇಶ್‍ರವರಿಗೆ, ಉಚ್ಚಂಗಿದುರ್ಗಕ್ಕೆ ಒಂದು ಆಂಬ್ಯುಲೆನ್ಸ್ ಕೊಡಿ, ಎಲ್ಲಿ ತುರ್ತು ಸಂದರ್ಭ ಇರುತ್ತದೆ ಅಲ್ಲಿಗೆ ಆಂಬ್ಯುಲೆನ್ಸ್ ಕಳುಹಿಸಿ ಎಂದರು. ಶಾಲೆ, ಕಾಲೇಜುಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಿ. ಮಹಾಮಾರಿ ಕೊರೊನಾ ವೈರಸ್‌ನಿಂದ ಜನಸಾಮಾನ್ಯರು ಭಯ ಪಡುವುದು ಬೇಡ. ಅದರೆ  ಜಾಗೃತಿಯಿಂದ ಹೊರಗಡೆ ಬಂದಾಗ ಮಾಸ್ಕ್ ಧರಿಸಿ  ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಕಾಳಮ್ಮ, ತಾಲ್ಲೂಕು ಪಂಚಾಯ್ತಿ  ಸದಸ್ಯ ಬಿ.ಕೆಂಚನಗೌಡ್ರು,  ತಹಶೀಲ್ದಾರ್‌ ಎಂ.ಎಲ್. ನಂದೀಶ್, ಉಪತಹಶೀಲ್ದಾರ್ ಫಾತೀಮಾ, ಟಿಎಚ್‍ಓ ವೆಂಕಟೇಶ್, ಮುಖಂಡರಾದ ಸಿ. ರಾಜಪ್ಪ, ನಾಗರಾಜ, ಎಸ್. ಹನುಮಂತಪ್ಪ, ಎನ್.ಜಿ. ಸಿದ್ದನಗೌಡ್ರು, ತೌಡೂರು ಮಂಜುನಾಥಯ್ಯ, ಕೆ. ಶಿವಯೋಗಿ, ಫಣಿಯಾಪುರ ಲಿಂಗರಾಜ,
ಬಿ. ಕೆಂಚನಗೌಡ್ರು ಇನ್ನಿತರರಿದ್ದರು.

error: Content is protected !!