ಹರಿಹರ, ಏ.26- ರಾಜ್ಯ ಸರ್ಕಾರವು ನಾಳೆ ರಾತ್ರಿಯಿಂದ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಘೋಷಣೆ ಮಾಡುತ್ತಿದ್ದಂತೆ, ನಗರದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತೆ ಎಸ್ ಲಕ್ಷ್ಮಿ, ತಾ.ಪಂ. ಇಓ ಜೆ.ಡಿ. ಗಂಗಾಧರನ್, ಸಿಪಿಐ ಸತೀಶ್ ಕುಮಾರ್, ಆರೋಗ್ಯ ಅಧಿಕಾರಿಗಳಾದ ಡಾ. ಚಂದ್ರಮೋಹನ್, ಡಾ. ಹನುಮ ನಾಯ್ಕ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಮಾಡಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಈಗಾಗಲೇ ತಾಲ್ಲೂಕಿನಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಕೊರೊನಾ ರೋಗವನ್ನು ತಡೆಗಟ್ಟಲು ಸರ್ಕಾರವು ನೀಡುತ್ತಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡುವುದಕ್ಕೆ ಮುಂದಾಗ ಬೇಕಾಗಿದೆ ಎಂದರು.
ಗ್ರಾಮಾಂತರದಲ್ಲಿ ಮತ್ತು ನಗರದಲ್ಲೂ ಸಹ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾ ಗುತ್ತದೆ. ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಹಾಕುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ರೋಗಿಗಳಿಗೆ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದ ಗುತ್ತೂರು ಬಳಿ ಕೊರೊನಾ ಆರೋಗ್ಯ ಕೇಂದ್ರ ತೆರೆಯಲಾಗುತ್ತಿದೆ.
ಪೌರಾಯುಕ್ತರಾದ ಎಸ್. ಲಕ್ಷ್ಮಿ ಮಾತನಾಡಿ, ನಗರಸಭೆ ವತಿಯಿಂದ ವ್ಯಾಪಾರಸ್ಥರು ಅಗತ್ಯ ವಸ್ತುಗಳು, ತರಕಾರಿ ಗಳನ್ನು ಬೆಳಗ್ಗೆ 6 ರಿಂದ 10 ರವರೆಗೆ ಗಾಂಧಿ ಮೈದಾನದಲ್ಲಿ ಮಾರಾಟ ಮಾಡಲು ಅವಕಾಶ ನೀಡ ಲಾಗಿದೆ. ನಗರಸಭೆ ವತಿಯಿಂದ ಎಲ್ಲಾ ವಾರ್ಡ್ಗಳಲ್ಲಿ ಸ್ವಚ್ಛತೆಗೆ ಮತ್ತು ಶುದ್ಧ ಕುಡಿಯುವ ನೀರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡದೆ ಇರುವವರ ಮೇಲೆ ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.
ಆರೋಗ್ಯ ಅಧಿಕಾರಿ ಡಾ. ಚಂದ್ರ ಮೋಹನ್ ಮಾತನಾಡಿ, ಕೊರೊನಾ ರೋಗಿಗಳಿಗೆ ತೊಂದರೆ ಆಗದಂತೆ ಎಲ್ಲಾ ಬಗೆಯ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕ ಆಸ್ಪತ್ರೆಯ ಡಾ. ಹನುಮನಾಯ್ಕ್ ಮಾತನಾಡಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಪ್ರತ್ಯೇಕವಾದ ಸ್ಥಳವನ್ನು ನಿಗದಿಪಡಿಸಲಾಗಿದೆ. ಆಸ್ಪತ್ರೆಯಲ್ಲಿ ಔಷಧಿ ಮತ್ತು ಚುಚ್ಚುಮದ್ದಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಸತೀಶ್ ಕುಮಾರ್,
ಡಾ. ವಿಶ್ವನಾಥ ಇನ್ನಿತರರು ಹಾಜರಿದ್ದರು.