ಹರಿಹರ: ಎಂದಿನಂತೆ ವ್ಯಾಪಾರ ವಹಿವಾಟು

ಹರಿಹರ, ಏ.26- ನಗರದಲ್ಲಿ ಇಂದು ವ್ಯಾಪಾರಸ್ಥರು ದಿನನಿತ್ಯ ವ್ಯಾಪಾರ ವಹಿವಾಟು ಮಾಡುವಂತೆ ಮಾಡಿದ್ದು ಮಾರುಕಟ್ಟೆಯಲ್ಲಿ ಕಂಡುಬಂತು.

ಸರ್ಕಾರದ ಆದೇಶದಂತೆ ಇಂದು ಅಂದರೆ ಹೋಟೆಲ್, ತರಕಾರಿ, ಬಾರ್, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಇವುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟನ್ನು ಬಂದ್ ಮಾಡುವಂತೆ ಆದೇಶ ಇದ್ದರೂ ಸಹ ಕೆಲವೊಂದು ಅಂಗಡಿಗಳು ಮುಚ್ಚಿದ್ದು ಬಿಟ್ಟರೆ ಉಳಿದ ಎಲ್ಲಾ ಅಂಗಡಿಯಲ್ಲಿ ದಿನ ನಿತ್ಯವೂ ನಡೆಯುವ ರೀತಿಯೇ ವ್ಯಾಪಾರ ವಹಿವಾಟು ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಿತು.

ಹೋಟೆಲ್‌ನವರು ಹಾಗೂ ಕೆಲವೊಂದು ಬಾರ್‌ಗಳಲ್ಲಿ ಪಾರ್ಸಲ್ ನೀಡಲು ಮುಂದಾದರೆ ಉಳಿದ ಬಾರ್‌ಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಮಾಡಿದರು. ಬಟ್ಟೆ ಅಂಗಡಿಯವರು ಅರ್ಧ ಬಾಗಿಲು ತೆಗೆದುಕೊಂಡು ವ್ಯಾಪಾರ ಮಾಡಿದರು. ತರಕಾರಿ ಮಾರುಕಟ್ಟೆಯನ್ನು ಗಾಂಧಿ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದರಿಂದ ದೊಡ್ಡ ಬೀದಿಯ ತರಕಾರಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಆಗಿರಲಿಲ್ಲ. ಅಲ್ಲಿ ಸಹ ಕೆಲವೊಂದು ಅಂಗಡಿಯಲ್ಲಿ ತರಕಾರಿ ಮಾರುತ್ತಿದ್ದರು.

ಎಂದಿನಂತೆ ಸಾರ್ವಜನಿಕರು ಮಾಸ್ಕ್ ಇಲ್ಲದೆ  ಓಡಾಡುತ್ತಿದ್ದರೂ, ಇವರನ್ನು ಕೇಳುವವರು ಯಾರೂ ಇರಲಿಲ್ಲ. ಬ್ಯಾಂಕ್‌ಗಳಲ್ಲಿ ಎಂದಿನಂತೆ ವ್ಯವಹಾರ ಚಾಲ್ತಿಯಲ್ಲಿತ್ತು. ಟ್ಯಾಕ್ಸಿ, ಆಟೋ, ಬಸ್ ಸಂಚಾರ ಎಂದಿನಂತೆ ಇತ್ತು.

ನಗರಸಭೆಯ ಒಳಗಡೆ ಯಾವುದೇ ವ್ಯಕ್ತಿಗಳಿಗೆ ಬರುವುದಕ್ಕೆ ಆಸ್ಪದ ನೀಡದೆ ಸಾರ್ವಜನಿಕರಿಗೆ ಹೊರಗಡೆ ನಿಲ್ಲಿಸಿ, ಅವರ ಕೆಲಸವನ್ನು ಮಾಡಿಕೊಡಲಾಗುತ್ತಿತ್ತು. ದೇವಸ್ಥಾನಗಳು ಮಾತ್ರ ಬೆಳಿಗ್ಗೆ ಪೂಜೆ ಸಲ್ಲಿಸಿ ನಂತರದಲ್ಲಿ ಬಾಗಿಲು ಹಾಕಿದವು. ಫುಟ್‌ಪಾತ್‌ನ  ಎಗ್‌ರೈಸ್,  ಟೀ ಸ್ಟಾಲ್ಸ್, ತಿಂಡಿಗಾಡಿಗಳು ಬಂದ್‌ ಆಗಿದ್ದವು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರ ಬಳಿ ಬಂಗಾರದ ಅಂಗಡಿಯ ಮಾಲೀಕರು ಆಗಮಿಸಿ, ನಮಗೆ ವ್ಯಾಪಾರ ಮಾಡಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಕ್ಕೆ ತಹಶೀಲ್ದಾರವರು ಅನುಮತಿ ನೀಡಿದ್ದಾರೆ. ಉಳಿದ ಎಲ್ಲಾ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದುಕೊಂಡು ವ್ಯಾಪಾರ ವಹಿವಾಟು ಮಾಡುವುದಕ್ಕೆ ಮುಂದಾಗಿದ್ದರ ಪರಿಣಾಮವಾಗಿ, ಇಂದು ಎಂದಿನಂತೆ ವ್ಯಾಪಾರ ವಹಿವಾಟು ನಡೆಯುವುದಕ್ಕೆ ದಾರಿ ಆಗಿದೆ ಎನ್ನಲಾಗಿದೆ.

ನಂತರ ಮಧ್ಯಾಹ್ನದ ಮೇಲೆ ಪೌರಾಯುಕ್ತೆ ಎಸ್. ಲಕ್ಷ್ಮಿ ಮತ್ತು ಕೆಲವು ಪೊಲೀಸ್ ಸಿಬ್ಬಂದಿಗಳು ಸೇರಿ ಮತ್ತೆ ಸರ್ಕಾರದ ಮಾರ್ಗಸೂಚಿ ಅನ್ವಯದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.

error: Content is protected !!