ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಬೇಕು

ಶಾಲೆಗಳು ಮುಚ್ಚಿರುವುದರಿಂದ ಮಕ್ಕಳು ಮೊಬೈಲ್ ವ್ಯಸನಿಗಳಾಗಿದ್ದಾರೆ. ಸುದೀರ್ಘ ಅವಧಿಯವರೆಗೆ ಮನೆಯಲ್ಲಿ ಇರುವ ಮಕ್ಕಳು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇದಕ್ಕೆಲ್ಲ ಪರಿಹಾರವೆಂದರೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವುದು.

– ವೈ.ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ

ಜಗಳೂರು, ಜು.18- ಎಸ್ಎಸ್ಎಲ್‌ಸಿ ಪರೀಕ್ಷೆ ನಂತರ ನಿಯಮಾನುಸಾರ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ತೆರೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಪಟ್ಟಣದ ಎಂಎಂಕೆ ಪ್ರೌಢಶಾಲಾ ಆವರಣದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಆಹಾರದ ಕಿಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಸುದೀರ್ಘ ಅವಧಿಯವರೆಗೆ ಶಾಲೆಗಳು ಮುಚ್ಚಿರುವುದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದಂತೆ ಆಗಿದೆ. ಆದ್ದರಿಂದ ಸರ್ಕಾರ ಎಲ್ಲ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಬೇಕು ಎಂದು ಒತ್ತಾಯಿಸಿದರು.

ಶಾಲೆಗೆ ಅನುದಾನಿತ ಶಾಲೆಗಳು ಮುಚ್ಚಿ ವರ್ಷಗಳಾಗಿದ್ದು ಸಂಸ್ಥೆಯವರು ಅನಿವಾರ್ಯವಾಗಿ ಶಿಕ್ಷಕರನ್ನು ತೆಗೆದು ಹಾಕಿರುತ್ತಾರೆ. ಇಂತಹ ಶಿಕ್ಷಕರಿಗೆ ಸರ್ಕಾರದ ವತಿಯಿಂದ 25 ಸಾವಿರ ರೂ. ಪರಿಹಾರ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದೆವು. ಇದರ ಪರಿಣಾಮವಾಗಿ ಸರ್ಕಾರ 5000 ರೂ ಹಣವನ್ನು ಕೊಡುವ ಮೂಲಕ ಶಿಕ್ಷಕರ ನೆರವಿಗೆ ಬಂದಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನೂ 5000 ರೂ. ಕೊಡಿಸಲು ಪ್ರಯತ್ನಿಸುವುದಾಗಿ ನಾರಾಯಣಸ್ವಾಮಿ ಅವರು ಭರವಸೆ ವ್ಯಕ್ತಪಡಿಸಿದರು.

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸರ್ಕಾರ 5000 ರೂ. ನೀಡುವ ಮೂಲಕ ಅವರ ಸಮಸ್ಯೆಗೆ ಸ್ಪಂದಿಸಿದೆ ಎಂದು ತಿಳಿಸಿದರು. 

ವಿಧಾನಪರಿಷತ್ ಸದಸ್ಯ ಚಿದಾನಂದಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಿರುವುದು ಶ್ಲ್ಯಾಘನೀಯ ಎಂದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದ್ವಾರಕೀಶ್, ಜಿಪಂ ಸದಸ್ಯ ಎಸ್.ಕೆ. ಮಂಜುನಾಥ್, ಬಿಜೆಪಿ ಮುಖಂಡರಾದ ಶಿವಕುಮಾರಸ್ವಾಮಿ, ಎಚ್ ನಾಗರಾಜ್, ಕಾರ್ಯದರ್ಶಿ ಎಂ.ಎಂ. ಲೋಕೇಶ್, ಪಿ.ಎಸ್. ಅರವಿಂದ್, ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!