ದಾವಣಗೆರೆ, ಫೆ.28- ರಾಜ್ಯ ಸರ್ಕಾರಿ ನೌಕರರ 18 ತಿಂಗಳ ತುಟ್ಟಿಭತ್ಯೆ ರದ್ದುಗೊಳಿಸಿರುವುದು, ಖಾಲಿ ಹುದ್ದೆ ಭರ್ತಿ ಮಾಡದಿರುವುದನ್ನು ಖಂಡಿಸಿ ಅಖಿಲ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರು ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಒತ್ತಡದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿ ರುವ ಈ ಸಂದರ್ಭದಲ್ಲಿ ನೌಕರರ 18 ತಿಂಗಳ ತುಟ್ಟಿಭತ್ಯೆ ರದ್ದುಗೊಳಿಸಿರುವುದು, ಖಾಲಿ ಹುದ್ದೆ ಭರ್ತಿ ಮಾಡದಿರುವುದು, ಕೇಂದ್ರ ಸರ್ಕಾರದ ಕಡ್ಡಾಯ ನಿವೃತ್ತಿ ಕುರಿತ ಆದೇಶ ಮುಂತಾದ ಕ್ರಮಗಳಿಂದ ನೌಕರರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.
ರಾಜ್ಯದ 7 ಕೋಟಿ ಜನತೆಗೆ ಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.20 ಲಕ್ಷ ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.50 ಲಕ್ಷಕ್ಕೂ ಹೆಚ್ಚಿವೆ. 2016ರಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯದಲ್ಲಿ ದಿನಗೂಲಿ, ಹೊರಗುತ್ತಿಗೆ ನೌಕರರಿಗೆ `ಸಮಾನ ಕೆಲಸಕ್ಕೆ ಸಮಾನ ವೇತನ’ ಒದಗಿಸಿಲ್ಲ ಎಂದು ಆರೋಪಿಸಿದರು.
2016ರ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ದಿನಗೂಲಿ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ನಟರಾಜ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಖಜಾಂಚಿ ಗೋವಿಂದರಾಜು, ತಾಲ್ಲೂಕು ಅಧ್ಯಕ್ಷ ರೇವಣ ಸಿದ್ದಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಂಗೇಶ್, ಪದಾಧಿಕಾರಿಗಳಾದ ಬಸವರಾಜ್, ಅಶ್ಪಕ್ ಖಾನ್, ಹರೀಶ್, ಹನುಮಂತಪ್ಪ, ದೇವರಾಜು, ವೀರಯ್ಯ, ಉಮೇಶ್, ರೇವಣಸಿದ್ದಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು.