ಕೂಡ್ಲಿಗಿಯ ವಾಲ್ಮೀಕಿ ಭವನದ ಉದ್ಘಾಟನೆಯಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ
ಕೂಡ್ಲಿಗಿ, ಫೆ.28- ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳು ಆಗಬೇಕಾದರೆ ಎಲ್ಲರೂ ಪಕ್ಷಭೇದ ಮರೆತು, ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ನೂತನ ವಾಲ್ಮೀಕಿ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕೂಡ್ಲಿಗಿ ತಾಲ್ಲೂಕಿನಲ್ಲಿ ವಾಲ್ಮೀಕಿ ಸಮುದಾಯ ಬಹುಸಂಖ್ಯಾತರಿದ್ದು ಬಹುತೇಕರು ಬಡತನದಿಂದಲೇ ಜೀವನ ನಡೆಸುತ್ತಿದ್ದು, ಇಂತಹ ಸಮುದಾಯಗಳಿಗೆ ವಾಲ್ಮೀಕಿ ಭವನ ಉಪಯೋಗವಾಗಬೇಕು. ಇದಕ್ಕೆ ಸ್ಥಳೀಯ ಸಮಾಜದ ಮುಖಂಡರು ಆಸಕ್ತಿ ತೋರಿ ಸಮುದಾಯ ಭವನವನ್ನು ಸದುದ್ಧೇಶಕ್ಕೆ ಬಳಸಿಕೊಳ್ಳಬೇಕೆಂದು ನೆರೆದಿದ್ದ ನೂರಾರು ಯುವಕರಿಗೆ ಕಿವಿಮಾತು ಹೇಳಿದರು.
ಸಮುದಾಯ ಭವನ ನಿರ್ವಹಣೆಗೆ ಟ್ರಸ್ಟ್ ಮಾಡಿಕೊಳ್ಳಿ. ಇಲ್ಲದಿದ್ದರೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ನೀಡುವುದರ ಮೂಲಕ, ಸಮುದಾಯ ಭವನ ಸದುಪಯೋಗಪಡಿಸಿಕೊಳ್ಳಿ ಎಂದರು. ನಾನು ಕೆಲಸ ಮಾಡಲು ಸಿದ್ದನಾಗಿದ್ದೇನೆ ನನಗೆ ಸಹಕಾರ ನೀಡಿ ಎಂದು ತಿಳಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಂಗಾರು ಹನುಮಂತು ಹಾಗೂ ತಾಲ್ಲೂಕು ಪರಿಶಿಷ್ಟ ವರ್ಗಗಳ ಅಧಿಕಾರಿ ಮೆಹಬೂಬ್ ಭಾಷಾ ಹಾಗೂ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸುರೇಶ್ ವಿಕ್ಟರಿ ಮತ್ತಿತರರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ಕೆ.ನಾಗರತ್ನಮ್ಮ ಲಿಂಗಪ್ಪ, ಪ.ಪಂ.ಅಧ್ಯಕ್ಷೆ ಶಾರದಾಬಾಯಿ, ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಮಲ್ಲಾಪುರ ಭರಮಪ್ಪ, ಬಿ.ಭೀಮೇಶ್, ಎಂ.ಸೊಲ್ಲಪ್ಪ, ರಾಷ್ಟ್ರೀಯ ಬಿಜೆಪಿ ಸಮಿತಿ ಸದಸ್ಯ ಕೆ.ಎಂ.ತಿಪ್ಪೇಸ್ವಾಮಿ, ಗುತ್ತಿಗೆದಾರ ಗುಂಡುಮುಣಗು ತಿಪ್ಪೇಸ್ವಾಮಿ, ಗುಂಡುಮುಣಗು ಪ್ರಕಾಶ್, ಸುರೇಶ್, ಕೆ.ಹೆಚ್.ವೀರನಗೌಡ, ಜಿಂಕಲ್ ನಾಗಮಣಿ, ಬಸಣ್ಣ, ಹೆಚ್.ರೇವಣ್ಣ, ಜಿ.ಪಾಪನಾಯಕ, ಸರೋಜಾ ಪಾಪಣ್ಣ, ಚಿನ್ನಪ್ಪ, ಮೆಹಬೂಬ್ ಭಾಷಾ, ಉಮಾದೇವಿ, ವಿ.ಗೀತಾ, ಚನ್ನಪ್ಪ, ಬಂಗಾರು ಹನುಮಂತು, ಕೆ.ಶಿವಪ್ಪನಾಯಕ, ಕೆ.ಈಶಪ್ಪ, ಚಂದ್ರು, ಪೂರ್ಯಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು.