ಹೋಟೆಲ್‌ಗಳು ಬಂದ್ ಊಟಕ್ಕೆ ಪರದಾಟ
ನಗರದಲ್ಲಿ ಹೋಟೆಲ್‌ಗಳು ತೆರೆಯದಿದ್ದರಿಂದ ತಿಂಡಿ, ಊಟಕ್ಕಾಗಿ ಪರದಾಡಬೇಕಾಯಿತು.
ಪೊಲೀಸರು, ಕೆಎಸ್ಸಾರ್ಟಿಸಿ ಸಿಬ್ಬಂದಿಗಳು, ಕೆಲವು ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಖಾಸಗಿಯಾಗಿ ರೂಂ ಪಡೆದು ವಾಸವಾಗಿದ್ದ ನೌಕರರು, ವಿದ್ಯಾರ್ಥಿಗಳು ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕಾಗಿ ಪರದಾಡಿದರು.
ಜೊಮೊಟೋ ಹಾಗೂ ಸ್ವಿಗ್ಗಿ ಮೂಲಕ ಕೆಲವರು ಆಹಾರ ತರಿಸಿಕೊಳ್ಳುತ್ತಿದ್ದರು.
10 ಗಂಟೆ ನಂತರ ನಗರ ಸಂಪೂರ್ಣ ಸ್ತಬ್ಧ, ಬಸ್ಸುಗಳ ಸಂಚಾರ
ದಾವಣಗೆರೆ, ಏ.24- ವಾರಾಂತ್ಯದ ಕರ್ಫ್ಯೂಗೆ ನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬೆಳಿಗ್ಗೆ 10 ಗಂಟೆಯ ನಂತರ ನಗರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು.
ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಿಸಲು ಪೊಲೀಸರು ರಸ್ತೆಗಿಳಿದಿದ್ದರು. ಬೈಕ್, ಆಟೋ, ಕಾರು ಪ್ರತಿ ವಾಹನಗಳ ಚಾಲಕರನ್ನೂ ಪ್ರಶ್ನಿಸುತ್ತಿದ್ದ ಪೊಲೀಸರು, ಕಾರಣ ಇಲ್ಲದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತಿದ್ದರು.
ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳಾದ ತರಕಾರಿ, ಹಾಲು, ಹಣ್ಣು, ದಿನಸಿ ಮಾರಾಟಕ್ಕೆ ಅವಕಾಶವಿತ್ತು. ಜನತೆ ಅಗತ್ಯ ವಸ್ತುಗಳನ್ನು ಬೆಳಿಗ್ಗೆಯೇ ಖರೀದಿಸಿಟ್ಟುಕೊಂಡಿದ್ದರು.
ಮಾರ್ಕೆಟ್ ಖಾಲಿ: ಪ್ರತಿ ದಿನ ಬೆಳಿಗ್ಗೆ ಗಿಜಿಗಿಡುತ್ತಿದ್ದ ಮಾರುಕಟ್ಟೆ ಪ್ರದೇಶದಲ್ಲಿ ಇಂದು ಜನಸಂಖ್ಯೆ ಅತಿ ವಿರಳವಾಗಿತ್ತು. ಮೊದಲೇ ಕರ್ಫ್ಯೂ ಬಗ್ಗೆ ತಿಳಿದಿದ್ದ ರೈತಾಪಿ ವರ್ಗ ನಗರದತ್ತ ಸುಳಿಯಲಿಲ್ಲ. ಬೆರಳೆಣಿಕೆಯಷ್ಟೇ ಮಾರುಕಟ್ಟೆ ಮಳಿಗೆಗಳು ತೆರೆಯಲ್ಪಟ್ಟಿದ್ದವು.
ತಹಶೀಲ್ದಾರ್ ಗಿರೀಶ್ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಬೀದಿ ಬದಿ ತರಕಾರಿ ಮಾರುತ್ತಿದ್ದವರಿಗೆ ಶೀಘ್ರವೇ ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದರು. 10 ಗಂಟೆ ವೇಳೆಗೆ ಮಾರುಕಟ್ಟೆ ಸಂಪೂರ್ಣ ಖಾಲಿಯಾಗಿತ್ತು.
ತಹಶೀಲ್ದಾರ್ ಕಚೇರಿ ಬಳಿಯ ತರಕಾರಿ ಮಾರುಕಟ್ಟೆಯಲ್ಲೂ ಬೆಳಿಗ್ಗೆ ಜನರ ಸಂಖ್ಯೆ ವಿರಳ ವಾಗಿತ್ತು. ಬೀದಿ ಬದಿಯಲ್ಲಿ ತರಕಾರಿ ಮಾರಲು ಅವಕಾಶವಿರಲಿಲ್ಲ. ಕೈ ಗಾಡಿ, ಆಟೋಗಳಲ್ಲಿ ತರಕಾರಿ ಕೊಂಡೊಯ್ಯುತ್ತಿದ್ದರು. ಜನತೆ ಗುಂಪು ಸೇರಿದಂತೆ ಎಪಿಎಂಸಿ ಅಧಿಕಾರಿಗಳು ಮೈಕ್ ಮೂಲಕ ಎಚ್ಚರಿಕೆ ನೀಡುತ್ತಿದ್ದರು. ಆಟೋ ಮತ್ತಿತರೆ ವಾಹನಗಳು ಸ್ಥಳದಿಂದ ತೆರಳುವಂತೆ ಸೂಚಿಸುತ್ತಿದ್ದರು.
ಸಂಚರಿಸಿದ ಖಾಲಿ ಬಸ್ಸುಗಳು: ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಪರಿಣಾಮ ವಿವಿಧ ಜಿಲ್ಲೆಗಳಿಂದ ಕೆಎಸ್ಸಾರ್ಟಿಸಿ ಬಸ್ಸುಗಳು ಬರುತ್ತಿದ್ದವು. ನಗರ ಸಾರಿಗೆ ಬಸ್ಸುಗಳೂ ಸಂಚರಿಸಿ ದವು. ಆದರೆ ಪ್ರಯಾಣಿಕರ ಸಂಖ್ಯೆ ಅತಿ ವಿರಳವಾಗಿತ್ತು.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಚಾಲಕರು, ನಿರ್ವಾಹಕರು ಅಲ್ಲಲ್ಲಿ ಹರಟೆಯಲ್ಲಿ ತಲ್ಲೀನರಾಗಿದ್ದರು. ಹೊರ ಜಿಲ್ಲೆಯಿಂದ ಬಂದ ಪ್ರಯಾಣಿಕರು ಆಟೋಗಳಿಲ್ಲದೆ ಸ್ವಂತ ವಾಹನ ಅಥವಾ ಕಾಲ್ನಡಿಗೆಯಿಂದಲೇ ಮನೆ ಸೇರಬೇಕಿತ್ತು.
ಮೆಡಿಕಲ್ ಶಾಪ್ ಹಾಗೂ ಪೆಟ್ರೋಲ್ ಬಂಕ್‌ಗಳು ಮಾತ್ರ ತೆರೆದಿದ್ದವು. ಆದರೆ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಕೆಲ ಮುಖ್ಯ ರಸ್ತೆಗಳಲ್ಲಿ ಅಡ್ಡವಾಗಿ ಬ್ಯಾರಿಕೇಡ್ ಇಟ್ಟು ಒಮ್ಮುಖ ರಸ್ತೆಗಳನ್ನಾಗಿ ಮಾಡಿ, ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು.