ದಾವಣಗೆರೆ, ಏ.25- ತರಳಬಾಳು ಬೃಹನ್ಮಠದ ಒಡನಾಡಿಗಳು, ಆತ್ಮೀಯ ಶಿಷ್ಯಂದಿರಾಗಿದ್ದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಮೋಹನ್ ಶಾಂತನಗೌಡರ ನಿಧನಕ್ಕೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಅತೀವ ಶೋಕ ವ್ಯಕ್ತಪಡಿಸಿದ್ದಾರೆ.
ಅವರ ಅಗಲಿಕೆಯಿಂದ ಶ್ರೇಷ್ಠ ನ್ಯಾಯಾಲಯದೊಂದಿಗೆ ಇದ್ದ ಕರ್ನಾಟಕದ ಒಂದು ಕೊಂಡಿ ಕಳಚಿ ಬಿದ್ದಂತಾಗಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಅನುಗ್ರಹಿಸಲೆಂದು ಶ್ರೀಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಸಾಣೇಹಳ್ಳಿ ಶ್ರೀ ಸಂತಾಪ : ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ಶಾಂತನಗೌಡರ ತಂದೆಯವರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದವರು. ಅದರಂತೆ ಇವರೂ ಸಹ ಮಠದ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು ಎಂದು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
ಶಾಂತನಗೌಡರ ಸಾವು ಕಾನೂನು ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರಲ್ಲಿ ಅಪಾರ ಗುರು ಭಕ್ತಿ, ಮಾನವೀಯ ಅಂತಃಕರಣ, ನ್ಯಾಯ, ನಿಷ್ಠೆ ಇತ್ತು. ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಬಸವಾದಿ ಶಿವಶರಣರು ಅವರ ಮನೆತನದ ಎಲ್ಲಾ ಸದಸ್ಯರಿಗೆ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಗಣ್ಯರ ಸಂತಾಪ : ಮೋಹನ್ ಶಾಂತನಗೌಡರ ನಿಧನಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.