ಜಗಳೂರು, ಜು.16- ಗ್ರಾಮೀಣ ಪತ್ರಕರ್ತರು ಸಂಕಷ್ಟದಲ್ಲಿದ್ದು, ಸರ್ಕಾರ ನೆರವು ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎಸ್. ಚಿದಾನಂದ ಒತ್ತಾಯಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳು ಸೇವೆ ಮಾಡುತ್ತಿರುವ ಪತ್ರಕರ್ತರು ತುಂಬಾ ಸಂಕಷ್ಟದಲ್ಲಿದ್ದಾರೆ. ಕೊರೊನಾ ವೇಳೆ ಫ್ರಂಟ್ಲೈನ್ ವಾರಿಯರ್ಸ್ಗಳಾಗಿ ಸೇವೆ ಮಾಡಿದ್ದಾರೆ. ಆದರೆ, ಈವರೆಗೂ ಸರ್ಕಾರ ಯಾವುದೇ ರೀತಿಯ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಉಪಾಧ್ಯಕ್ಷ ಕೊಟ್ರೇಶ್ ಮಾತನಾಡಿ, ಪತ್ರಕರ್ತರು ಪ್ರಾಮಾಣಿಕತೆ, ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಬರವಣಿಗೆಯ ಮೂಲಕ ಸಮಾಜದ ಮೇಲೆ ಬೆಳಕು ಚೆಲ್ಲಬೇಕು ಎಂದರು.
ಗೌರವಾಧ್ಯಕ್ಷ ಡಿ. ಶ್ರೀನಿವಾಸ್ ಮಾತನಾಡಿ, ಅತ್ಯಂತ ಬದ್ಧತೆಯಿಂದ ಕೆಲಸ ಮಾಡುವ ಗ್ರಾಮೀಣ ಪತ್ರಕರ್ತರಿಗೆ ಭದ್ರತೆ ಇಲ್ಲದಂತಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಕೆಲಸ ಮಾಡುವ ಪತ್ರಕರ್ತರಿಗೆ ಕೊರೊನಾ ಸಮಯದಲ್ಲಿ ತಾಲ್ಲೂಕು ಆಡಳಿತ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ನಡೆಸಿಕೊಂಡ ರೀತಿ ಸರಿ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಬಿ.ಪಿ. ಸುಭಾನ್ ಮಾತನಾಡಿ, ಗ್ರಾಮೀಣ ಪತ್ರಕರ್ತರ ಸೇವೆ ಅಪಾರವಾಗಿದ್ದು, ಸಾಮಾಜಿಕವಾಗಿ ಜನರು ಎದುರಿಸುವ ಜ್ವಲಂತ ಸಮಸ್ಯೆಗಳನ್ನು ಪ್ರಕಟಿಸಿ ಅವರಿಗೆ ನ್ಯಾಯ ಕೊಡುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ. ಲೋಕೇಶ್, ಪತ್ರಕರ್ತರಾದ ಎಂ. ರಾಜಪ್ಪ, ಧನ್ಯಕುಮಾರ್, ಸೊಕ್ಕೆ ಜಗದೀಶ್, ಮಂಜಯ್ಯ, ಸಯೀದ್ ವಾಸಿಂ, ಬಾಬು, ತಿಪ್ಪೇಸ್ವಾಮಿ, ಮಾರಪ್ಪ, ಜೆ.ಓ. ಮಾರುತಿ, ರಕೀಬ್, ಮಾರಪ್ಪ, ಮಾರುತಿ, ಮಹಮ್ಮದ್ ರಕೀಫ್ ಇನ್ನಿತರರಿದ್ದರು.