ಜಗಳೂರು, ಫೆ.25- ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಪಟ್ಟಣ ಪಂಚಾಯ್ತಿ ನೆರವು ನೀಡಲು ಬದ್ಧರಾಗಿದ್ದು, ಸಂವಿಧಾನ ಶಿಲ್ಪಿಗೆ ಅಪಮಾನವಾಗದಂತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಸಂಘ-ಸಂಸ್ಥೆಗಳು ತೆಗೆದುಕೊಳ್ಳಬೇಕು ಎಂದು ಪ.ಪಂ. ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ 2021-22 ನೇ ಸಾಲಿನ ಬಜೆಟ್ ಮಂಡನೆಯ 2ನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ 2 ಸಾವಿರ ವಸತಿ ರಹಿತ ಕುಟುಂಬಗಳಿದ್ದು, ಸರ್ಕಾರಿ ಜಮೀನು ಅಥವಾ ಖಾಸಗಿ ವ್ಯಕ್ತಿಗಳು ಜಮೀನು ನೀಡುತ್ತಿಲ್ಲ. ಆದ್ದರಿಂದ ಬಜೆಟ್ನಲ್ಲಿ ನಿವೇಶನಕ್ಕೆ ಪ್ರಾಶಸ್ತ್ಯ ನೀಡಲು ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ರಾಜು ಡಿ. ಬಣಕಾರ್ ಪ್ರತಿಕ್ರಿಯಿಸಿ, ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿ ನಿರ್ಮಾಣಕ್ಕಾಗಿ ಶೇ. 24.1 ಅಡಿಯಲ್ಲಿ 3 ಲಕ್ಷ ಹಣ ಮೀಸಲಿದ್ದು.ಸರ್ಕಾರದ ನಿಯಮಾವಳಿಯ ಪ್ರಕಾರ ಸಂಘಟನೆಗಳು ಮುಂದೆ ಬಂದರೆ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದರು.
ಪ.ಪಂ. ಸದಸ್ಯೆ ಮಂಜಮ್ಮ ಮಾತನಾಡಿ, ಹೊರವಲಯದ ರುದ್ರಭೂಮಿಯಲ್ಲಿ ಸ್ವಚ್ಛತೆಗೆ ಹಾಗೂ ಮುಕ್ತಿ ವಾಹನ ಖರೀದಿಸಲು ಬಜೆಟ್ನಲ್ಲಿ ಅವಕಾಶ ಕಲ್ಪಿಸಿ ಎಂದು ಸಲಹೆ ನೀಡಿದರು.
ನಾಮನಿರ್ದೇಶಿತ ಸದಸ್ಯ ಬಿ.ಪಿ. ಸುಭಾನ್ ಮಾತನಾಡಿ, ಪಟ್ಟಣದಲ್ಲಿ ಮನೆ ಕಸ ಸಂಗ್ರಹ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಇದರ ಜವಾಬ್ದಾರಿಯನ್ನು ನಿಯಮಾನುಸಾರ ಮಹಿಳಾ ಸ್ವ ಸಹಾಯ ಸಂಘ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲು ಮುಂದಿನ ಬಜೆ ಟ್ನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಸದಸ್ಯ ಲುಕ್ಮಾನ್ ಖಾನ್ ಮಾತನಾಡಿ, ರಸ್ತೆ ಬದಿಯ ಸ್ವಚ್ಛತೆಗೆ ಹಾಗೂ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಸಲಹೆ ನೀಡಿದರು.
ಸದಸ್ಯ ರುದ್ರಮುನಿ ಮಾತನಾಡಿ, ಹೊಸಬಸ್ ನಿಲ್ದಾಣದಲ್ಲಿ ಮಳಿಗೆಗಳು ಖಾಲಿ ಇವೆ. ಸ್ವಚ್ಛಗೊಳಿಸಿ ಹರಾಜು ಹಾಕಲು ಕ್ರಮ ಕೈಗೊಳ್ಳಿ ಎಂದರು. ಹಿರಿಯ ನಾಗರೀಕ ಸಂಘದ ತಾಲ್ಲೂಕು ಅಧ್ಯಕ್ಷ ಸಿ. ತಿಪ್ಪೇಸ್ವಾಮಿ ಮಾತನಾಡಿ,ಪಟ್ಟಣದ ಚಳ್ಳಕೆರೆ ರಸ್ತೆಯ ವೃತ್ತಕ್ಕೆ ತಾಲ್ಲೂಕಿಗೆ ಕೊಡುಗೆ ನೀಡಿದ ಇಮಾಂ ಸಾಹೇಬರ ಹೆಸರಿಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷೆ ಲಲಿತ ಶಿವಣ್ಣ, ಸದಸ್ಯರಾದ ಪಾಪಲಿಂಗಪ್ಪ, ದೇವರಾಜ್, ರೇವಣ್ಣ, ಶಕೀಲ್, ರವಿ ಕುಮಾರ್, ರಮೇಶ, ಮಹಮದ್ ಇನ್ನಿತರರು ಭಾಗವಹಿಸಿದ್ದರು.