ತೆಗ್ಗಿನಮಠ ಸಂಸ್ಥೆ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ
ಹರಪನಹಳ್ಳಿ, ಫೆ.23 – ಶಿಸ್ತು, ಸಮಯ ಪ್ರಜ್ಞೆ ಪಾಲಿಸಿದರೆ ಭವಿಷ್ಯದಲ್ಲಿ ಉತ್ತಮ ಶಿಕ್ಷಕರಾಗಲು ಸಾಧ್ಯವಾಗುತ್ತದೆ ಎಂದು ತೆಗ್ಗಿನಮಠ ಸಂಸ್ಥೆ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಹೇಳಿದರು.
ಪಟ್ಟಣದ ತೆಗ್ಗಿನಮಠ ಸಂಸ್ಥೆ ಕಟ್ಟೆ ಸೇತುರಾಮಚಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆರಂಭ ವಾದ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ ದರು.ಎರಡು ವರ್ಷ ಶಿಕ್ಷಕರ ತರಬೇತಿ ಪಡೆದು, ಜೀವನದಲ್ಲಿ ಅಳವಡಿಸಿಕೊಂಡರೆ ಪ್ರತಿಭಾವಂತ ಶಿಕ್ಷಕರಾಗಲು ಸಹಕಾರಿ ಆಗುತ್ತದೆ. ಕಲಿಕೆ ಮತ್ತು ಕಲಿಸುವಲ್ಲಿ ಪ್ರಾಮಾಣಿಕತೆ ಅತ್ಯಗತ್ಯ ಎಂದರು.
ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಂ.ರಾಜಶೇಖರ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಪೌರತ್ವ ತರಬೇತಿ ಶಿಬಿರದ ಮೂಲಕ ಆದರ್ಶ ಪ್ರಜೆಗಳನ್ನು ನಿರ್ಮಿಸಲಾಗುತ್ತದೆ, ಶಿಬಿರದಲ್ಲಿ ಶ್ರಮದಾನ, ಸಾಮಾಜಿಕ ಮೌಲ್ಯಗಳನ್ನು ಕಲಿಸಲಾಗುತ್ತದೆ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಪೌರತ್ವ ತರಬೇತಿ ನೀಡುವ ಮೂಲಕ ಸಮಾಜ ಮತ್ತು ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಲಾಗುವುದು. ಅಷ್ಟೇ ಅಲ್ಲದೇ ತಾಳ್ಮೆ, ಮೌಲ್ಯ, ಸಮಯ ಪ್ರಜ್ಞೆ ಮನೋಭಾವ ಬೆಳೆಸಲು ಶಿಬಿರ ಸಹಕಾರಿ ಆಗಬಲ್ಲದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಡಾ.ಅರುಂಡಿ ಸುವರ್ಣ ಅವರು ಚಿಂತನ-ಮಂಥನ ಗೋಷ್ಠಿಯಲ್ಲಿ ರಾಜಕೀಯದಲ್ಲಿ ಮಹಿಳೆ ಪಾತ್ರ ಕುರಿತು ಉಪನ್ಯಾಸ ನೀಡಿದರು. ಎಸ್.ಸಿ.ಎಸ್.ಫಾರ್ಮಸಿ ಕಾಲೇಜ್ ಪ್ರಾಚಾರ್ಯ ನಾಗೇಂದ್ರರಾವ್ ಮಾತನಾಡಿದರು.
ಹಾವೇರಿ ಟಿಎಂಎಇ ಬಿ.ಎಡ್.ಕಾಲೇಜಿನ ಡಾ.ಎಚ್.ಸಿ.ಚಂದ್ರಶೇಖರಪ್ಪ, ಡಾ.ಎಂ.ಗಂಗಪ್ಪ, ಟಿ.ಎಚ್.ಗಿರೀಶ್, ಡಾ.ಸಿ.ಎಂ.ವೀರೇಶ್, ಮರುಳಸಿದ್ದಪ್ಪ, ಕೆ.ಎಂ.ಲತಾ, ವಿದ್ಯಾರ್ಥಿ ಪದಾಧಿಕಾರಿಗಳಾದ ಜಿ.ಸಂತೋಷ್, ಕೆ.ಎಂ.ಮೇಘನಾ, ವಿ.ಪ್ರಸನ್ನಕುಮಾರ, ಟಿ.ರಾಘವೇಂದ್ರ, ನಿಸಾರ್ ಅಹ್ಮದ್, ಜಿ.ಮಾರುತಿ, ಜಿ.ಕಿರಣ, ಜೆ.ನವೀನ್ ಉಪಸ್ಥಿತರಿದ್ದರು.