ಹರಪನಹಳ್ಳಿ, ಜು.14- ಕೊರೊನಾ ನಿರ್ಮೂಲನೆಗಾಗಿ ಹರಪನಹಳ್ಳಿ ತಾಲ್ಲೂಕಿನ ಹೊಂಬಳಗಟ್ಟಿಯಲ್ಲಿ ಕುಟುಂಬವೊಂದು ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಸಿದ್ದ ವಿವಿಧ ಹೋಮ, ಹವನ ಕಾರ್ಯಕ್ರಮವನ್ನು ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಮುಕ್ತಾಯಗೊಳಿಸಲಾಯಿತು.
ಹೊಂಬಳಗಟ್ಟಿ ಗ್ರಾಮದ ವಿಶ್ವಾರಾಧ್ಯ ಮಠದಲ್ಲಿ ಸುರಪುರ ಹಿರೇಮಠದ ಹೊಳಿಬಸಯ್ಯ ಶಾಸ್ತ್ರಿಗಳು ಕುಟುಂಬ ಸಮೇತರಾಗಿ ಮೃತ್ಯುಂಜಯ ಹೋಮ, ಗಣ ಹೋಮ, ಧನ್ವಂತರಿ ಹೋಮ, ನವಗ್ರಹ ಹೋಮ ಹೀಗೆ ವಿವಿಧ ಹೋಮಗಳನ್ನು ಮಾಡುತ್ತಿದ್ದಾರೆ. ಪ್ರತಿದಿನ ಸಂಜೆ 5 ರಿಂದ ರಾತ್ರಿ 8.30 ರವರೆಗೆ ಮೂರೂವರೆ ತಾಸು ಹೋಮ ಮಾಡಿ ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿದರು.
ಸಮಾರೋಪ ಸಮಾರಂಭದಲ್ಲಿ ಅಂಗೂರಿನ ಶ್ರೀ ಶಿವಯೋಗೇಶ್ವರ ಸ್ವಾಮೀಜಿ, ರಂಗನಾಥನಹಳ್ಳಿ ಚೆನ್ನವೀರ ಸ್ವಾಮಿಗಳು, ಪ್ರತ್ಯಂಗಿರಾದೇವಿ ಆರಾಧಕಿ ರುದ್ರಮ್ಮ, ವೇದಮೂರ್ತಿಗಳಾದ ವಿಜಯಶಾಸ್ತ್ರಿ, ಹರಿಹರ ಕೊಟ್ರಯ್ಯ ಶಾಸ್ತ್ರಿ, ಕುಣೆಬೆಳಕೇರಿ ಶಿವಲಿಂಗಯ್ಯ ಶಾಸ್ತ್ರಿ, ಶಿವಯ್ಯಶಾಸ್ತ್ರಿ, ಸಂತೋಷ್ ಶಾಸ್ತ್ರಿ, ಕಾಶಿನಾಥ ಶಾಸ್ತ್ರಿ, ಹೊಳಿಬಸಯ್ಯ ಶಾಸ್ತ್ರಿಗಳ ಪತ್ನಿ, ಮೂವರು ಮಕ್ಕಳು, ಸೊಸೆ ಹಾಗೂ ಮುಖ್ಯ ಶಿಕ್ಷಕ ಮಂಜುನಾಥ ಪೂಜಾರ್ ಪಾಲ್ಗೊಂಡಿದ್ದರು.