ಮಲೇಬೆನ್ನೂರು, ಫೆ.22 – ಇಲ್ಲಿನ ಅಕ್ಕಿ ಉದ್ಯಮಿ ಬಿ.ಎಂ ನಂಜಯ್ಯ ಹಾಗೂ ಜಿ.ಪಂ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಅವರ ನಿವಾಸಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಬೇಡ ಜಂಗಮ ಸಮಾಜದ ಡಾ. ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನಿನ್ನೆ ಭೇಟಿ ನೀಡಿದ್ದರು.
ಚನ್ನಗಿರಿಯಲ್ಲಿ ಮೊನ್ನೆ ನಡೆದ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ 2ನೇ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿ, ವಾಪಸ್ ಮಹಾರಾಷ್ಟ್ರಕ್ಕೆ ತೆರಳುವ ಮಾರ್ಗ ಮಧ್ಯೆ ಮಲೇಬೆನ್ನೂರಿಗೆ ಭೇಟಿ ನೀಡಿದ ಅವರನ್ನು ಸ್ವಾಗತಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬೇಡ ಜಂಗಮರಾದ ನಾವು ಪ್ರಮಾಣ ಪತ್ರ ಪಡೆದು ಎಸ್ಸಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ಕರ್ನಾಟಕದಲ್ಲೂ ಬೇಡ ಜಂಗಮರಿಗೆ ಎಸ್ಸಿ ಪ್ರಮಾಣ ಪತ್ರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದ್ದೇವೆ ಎಂದರು.
ಬೇಡ ಜಂಗಮ ಜಾತಿಯನ್ನು 1976 ರ ಪರಿಶಿಷ್ಟ ಪಟ್ಟಿಯ ಕ್ರಮ ಸಂಖ್ಯೆ 19ರಲ್ಲಿ ಕೇಂದ್ರ ಸರ್ಕಾರ ಸೇರಿಸಿರುವುದು ಸತ್ಯವಾಗಿದೆ. ಆದಾಗ್ಯೂ ಆಳುವ ಸರ್ಕಾರಗಳು ಈ ಜನಾಂಗಕ್ಕೆ ಸಿಗಬೇಕಾದ ಮೀಸಲಾತಿ ಜಾತಿ ಪ್ರಮಾಣ ಪತ್ರವನ್ನು ನೀಡಲು ಹಿಂದೆ-ಮುಂದೆ ಮಾಡುತ್ತಿವೆ ಎಂದು ಡಾ ಜಯಸಿದ್ದೇಶ್ವರ ಸ್ವಾಮೀಜಿ ದೂರಿದರು.
ಪುರಸಭೆ ಸದಸ್ಯ ಬಿ.ಎಂ. ಚನ್ನೇಶ್ ಸ್ವಾಮಿ, ಗುತ್ತಿಗೆದಾರ ಬಿ.ಎಂ. ಜಗದೀಶ್ವರ ಸ್ವಾಮಿ, ರೈಸ್ ಮಿಲ್ ಮಾಲೀಕ ಬಿ.ಎಂ. ಹಾಲಸ್ವಾಮಿ ಮತ್ತಿತರರು ಈ ವೇಳೆ ಹಾಜರಿದ್ದರು.