ಹರಪನಹಳ್ಳಿ, ಫೆ.22- ತೆಲಂಗಾಣ ರಾಜ್ಯದಲ್ಲಿ ನಡೆದ ವಕೀಲ ದಂಪತಿಯ ಭೀಕರ ಹತ್ಯೆ ಖಂಡಿಸಿ, ಹರಪನಹಳ್ಳಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಟಿ.ವೆಂಕಟೇಶ್ ಮಾತನಾಡಿ, ತೆಲಂಗಾಣ ರಾಜ್ಯದಲ್ಲಿ ಫೆ.17 ರಂದು ನಡೆದ ವಕೀಲ ದಂಪತಿಯ ಭೀಕರ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ದೇಶದಲ್ಲಿ ವಕೀಲ ವೃತ್ತಿಯನ್ನು ನಿರ್ವಹಿಸಿಕೊಂಡು ತಮ್ಮ ಜೀವನ ನಡೆಸುತ್ತಿರುವ ವಕೀಲರಿಗೆ ರಕ್ಷಣೆಗಾಗಿ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದರು.
ದೇಶದಲ್ಲಿ ದಿನದಿಂದ ದಿನಕ್ಕೆ ವಕೀಲರ ಮೇಲೆ ಹಲ್ಲೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತೆಲಂಗಾಣ ರಾಜ್ಯದ ವಕೀಲ ದಂಪತಿಯನ್ನು ಕಿಡಿಗೇಡಿಗಳು ನಡು ರಸ್ತೆಯಲ್ಲಿ ಮಾರಕ ಅಸ್ತ್ರದಿಂದ ಹತ್ಯೆ ಮಾಡಿದ ನರಹಂತಕರಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೆ.ಬಸವರಾಜ್, ಜಂಟಿ ಕಾರ್ಯದರ್ಶಿ ಎಂ.ಮೃತ್ಯುಂಜಯ, ಕೆ.ಪ್ರಕಾಶ್, ವಿ.ಹೂಲೆಪ್ಪ, ಎ.ಎಲ್.ರೇವಣಸಿದ್ದಪ್ಪ, ಎನ್.ನಂದೀಶ್, ವಕೀಲರಾದ ಗಂಗಾಧರ ಗುರುಮಠ, ಕೃಷ್ಣಮೂರ್ತಿ, ಇದ್ಲಿ ರಾಮಪ್ಪ, ರುದ್ರಮನಿ, ಪ್ರಕಾಶ್ ಗೌಡ್ರು, ಮಂಜ್ಯಾನಾಯ್ಕ, ಟಿ.ಎಂ.ರಮೇಶ್, ಜಗದೀಶ್ ಗೌಡ್ರು, ಬಾಗಳಿ ಮಂಜುನಾಥ್, ಜಿ.ಎಸ್.ತಿಪ್ಪೇಸ್ವಾಮಿ, ಬಂಡ್ರಿ ಗೋಣಿ ಬಸಪ್ಪ, ಡಿ.ಹನುಮಂತಪ್ಪ, ಸುರೇಶ್, ವಾಮದೇವ, ಹೆಚ್.ಎಂ.ಪಂಚಾಕ್ಷರಿ ಸೇರಿದಂತೆ ಇತರರಿದ್ದರು.