ಮಾಸ್ಕ್ ಧರಿಸದವರಿಗೆ ಅಧಿಕಾರಿಗಳಿಂದ ತರಾಟೆ, ದಂಡ

ಹರಿಹರ, ಏ.22- ಕೋವಿಡ್ ರೋಗವು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು, ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮಿ ಮತ್ತು ಸಿಪಿಐ ಸತೀಶ್ ಕುಮಾರ್ ಅವರು ನಗರದಲ್ಲಿಂದು ಸುಡುವ ಬಿಸಿಲನ್ನೂ ಲೆಕ್ಕಿಸದೆ ಜನನಿಬಿಡ ಪ್ರದೇಶವಾದ ತರಕಾರಿ ಮಾರುಕಟ್ಟೆ, ಹೋಟೆಲ್, ಡಾಬಾ, ಬಾರ್, ಮಾಲ್, ಲಾಡ್ಜ್, ಸೇರಿದಂತೆ ವಿವಿಧೆಡೆಯಲ್ಲಿ ಮಾಸ್ಕ್ ಧರಿಸದೆ ಇರುವವರಿಗೆ ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ಅವರಿಗೆ ಲಾಟಿ ರುಚಿ ತೋರಿಸಿ, ದಂಡ ಹಾಕಿದರು.

ನಗರದ ಹಳೇ ಪಿಬಿ ರಸ್ತೆ, ಮುಖ್ಯ ರಸ್ತೆ, ದೇವಸ್ಥಾನ ರಸ್ತೆ, ಹೆಚ್. ಶಿವಪ್ಪ ವೃತ್ತ, ರಾಣಿ ಚೆನ್ನಮ್ಮ ವೃತ್ತದಲ್ಲಿ ವ್ಯಾಪಾರ, ವಹಿವಾಟು ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಸ್ಕ್ ಧರಿಸದೆ ಓಡಾಡುವ ಸಾರ್ವಜನಿಕರಿಗೆ, ವಾಹನ ಮಾಲೀಕರಿಗೆ, ಅಂಗಡಿಯಲ್ಲಿ ಕರ್ತವ್ಯವನ್ನು ಮಾಡುತ್ತಿರುವ ಕೆಲಸಗಾರರಿಗೆ ಚಳಿ ಬಿಡಿಸಿದರು.

ಸಿಪಿಐ ಸತೀಶ್ ಕುಮಾರ್ ಮಾತನಾಡಿ, ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ನಿರ್ಲಕ್ಷ್ಯ ಭಾವನೆ ಬಂದಿದ್ದು, ಅದನ್ನು ಮನಸ್ಸಿನಿಂದ ತೆಗೆದು ಹಾಕಬೇಕು. ಈಗಾಗಲೇ ಸರ್ಕಾರ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಆರೋಗ್ಯವಂತ ಜೀವನವನ್ನು ನಡೆಸಬೇಕು. ಬೇಸರದ ವಿಷಯ ವೆಂದರೆ ನಾವುಗಳು ರಸ್ತೆಗೆ ಇಳಿದು ಜನರಿಗೆ ಅರಿವು ಮೂಡಿಸುವಂತಹ ಕಾರ್ಯಕ್ಕೆ ಮುಂದಾಗ ಬೇಕಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿ ಎಂದು ಹೇಳಿದರು.

ನಗರದ ಹೋಟೆಲ್, ಡಾಬಾದವರಿಗೆ ಪಾರ್ಸಲ್ ಮಾತ್ರ ಕೊಡುವಂತೆ ಸೂಚಿಸಲಾಗಿದೆ. ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಸರ್ಕಾರದ ಮಾರ್ಗಸೂಚಿ ಅನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. 

ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ ನಗರದಲ್ಲಿ ಕಸ ಸಾಗಿಸುವ ವಾಹನ ಗಳ ಮೂಲಕ ಸಾರ್ವಜನಿಕರಿಗೆ ಕೊರೊನಾ ರೋಗದ ಅರಿವು ಮೂಡಿಸಲಾಗುತ್ತಿದೆ. ಮತ್ತು ಪ್ರತಿದಿನ ನಗರಸಭೆ ಸಿಬ್ಬಂದಿಗಳು ಕಚೇರಿಯ ಕೆಲಸಕ್ಕೆ ಆದ್ಯತೆ ಕೊಡುವುದರ ಜೊತೆಗೆ ಮಾಸ್ಕ್ ಧರಿಸದೆ ಇರುವ ಸಾರ್ವಜನಿಕರಿಗೆ ಅರಿವು ಮೂಡಿಸಿ, ದಂಡ ಹಾಕುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಂಜುನಾಥ, ಕಿರಣ್ ಕುಮಾರ್, ಅಣ್ಣಪ್ಪ, ಪ್ರಕಾಶ್, ತಿಪ್ಪೇಸ್ವಾಮಿ, ಪೊಲೀಸ್ ಮುರುಳೀಧರ್, ಡಿ.ಟಿ‌. ಶ್ರೀನಿವಾಸ್ ಇನ್ನಿತರರಿದ್ದರು.

error: Content is protected !!