ಹೈಕೋರ್ಟ್ ನಿರ್ದೇಶನದಂತೆ ಪರೀಕ್ಷಾ ಫಲಿತಾಂಶಕ್ಕೆ ಆಗ್ರಹ
ದಾವಣಗೆರೆ, ಜು. 12 – ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಕೊರೊನಾ ಸಂದರ್ಭದಲ್ಲಿ ಪ್ರಕಟಿಸಿರುವ ಪರೀಕ್ಷಾ ಫಲಿತಾಂಶ ಅವೈಜ್ಞಾನಿಕವಾಗಿದ್ದು ವಿದ್ಯಾರ್ಥಿಗಳ ಹಿತಕ್ಕೆ ವಿರುದ್ಧವಾಗಿದೆ ಎಂದು ಕಾನೂನು ವಿದ್ಯಾರ್ಥಿಗಳ ಪ್ರತಿನಿಧಿಗಳು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದ್ದಾರೆ.
ಎರಡು ಸೆಮಿಸ್ಟರ್ಗಳಲ್ಲಿ ಗಳಿಸಿದ ಹೆಚ್ಚಿನ ಅಂಕಗಳನ್ನು ಪರಿಗಣಿಸಿ, ಫಲಿತಾಂಶ ನಿರ್ಧರಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಇದನ್ನು ಉಲ್ಲಂಘಿಸಿ ವಿಶ್ವವಿದ್ಯಾನಿಲಯ ತನ್ನದೇ ಆದ ಮಾರ್ಗಸೂಚಿಯ ಅನ್ವಯ ಫಲಿತಾಂಶ ಪ್ರಕಟಿಸಿದೆ. ಇದರಿಂದಾಗಿ ಬಹುತೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಪರೀಕ್ಷೆ ದಿನವನ್ನು ಹಲವು ಬಾರಿ ಬದಲಿಸಿದೆ. ಅಂತಿಮವಾಗಿ ಮೊದಲ ಸೆಮ್ನಲ್ಲಿ ಶೇ.40ಕ್ಕಿಂತ ಹೆಚ್ಚು ಅಂಕ ಪಡೆದವರನ್ನು ಮಾತ್ರ ಮುಂದಿನ ಸೆಮ್ನಲ್ಲಿ ಉತ್ತೀರ್ಣ ಮಾಡುವುದಾಗಿ ಹೇಳಿದೆ. ಈ ಕ್ರಮದಿಂದ ಶೇ.90 ರಷ್ಟು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೇ, ಥಿಯರಿ ಅಂಕಗಳನ್ನು ಖಾಲಿ ಬಿಡಲಾಗಿದೆ. ಈ ಬಗ್ಗೆಯೂ ವಿಶ್ವವಿದ್ಯಾನಿಲಯ ಸ್ಪಷ್ಟನೆ ನೀಡಬೇಕು. ಹೈಕೋರ್ಟ್ ನಿರ್ದೇಶನದಂತೆ ಫಲಿತಾಂಶ ಪ್ರಕಟಿಸಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು. ವಿಶ್ವವಿದ್ಯಾ ನಿಲಯದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಾನೂನು ವಿದ್ಯಾರ್ಥಿಗಳು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಲಕ್ಷ್ಮಣ್, ಯು. ಶ್ರೀಧರ, ಕೆ.ಸಿದ್ದನಗೌಡ, ಎಸ್. ವೀಣಾ, ಹೆಚ್. ರಮೇಶ್ ನಾಯ್ಕ, ಕೆ. ಸೋಮ್ಯನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.