ಹೊನ್ನಾಳಿ, ಜು.10- ಕಪ್ಪುಮಣ್ಣಿನ ಪ್ರದೇಶವಾದ ಹತ್ತೂರು, ದೊಡ್ಡೇರಹಳ್ಳಿ, ಕತ್ತಿಗೆ ಗ್ರಾಮದ ಜಮೀನುಗಳಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಬೆಳೆದು ರಾಜ್ಯ ಪ್ರಶಸ್ತಿ ಪಡೆದಿರುವ ನಿದರ್ಶನಗಳಿದ್ದು, ಕಳೆದ 25 ದಿನಗಳಿಂದ ಮಳೆ ಬಾರದೆ ರೈತರು ಬಿತ್ತಿದ ಮೆಕ್ಕೆಜೋಳವನ್ನು ಅಳಿಸುವ ಕರುಣಾಜನಕ ಸ್ಥಿತಿ ಕಂಡು ಬಂದಿದೆ.
ವಾರದ ಕೆಳಗೆ ತುಂಗ ಎಡನಾಲೆ ವ್ಯಾಪ್ತಿಯ ಉಪಕಾಲುವೆಯ ಜಮೀನುಗಳಲ್ಲಿ ಮಳೆ ಬಾರದೆ ರೈತರು ಕಾಡಾ ಅಧ್ಯಕ್ಷರಿಗೆ ಮನವಿ ನೀಡಿ, ಕಾಲುವೆಗೆ ನೀರು ಬಿಡುವಂತೆ ಮನವಿ ಮಾಡಿದ್ದು, ಒಂದು ಕಡೆ ಮೆಕ್ಕೆಜೋಳ ಬೆಳೆದ ರೈತ ಮಳೆಗಾಗಿ ಕಾಯುತ್ತಿದ್ದರೆ, ಕೆಲವು ಜಮೀನುಗಳಲ್ಲಿ ಅಂತರದಲ್ಲಿ ಬಿತ್ತಿದ್ದ ಜಮೀನುಗಳನ್ನು ಅಳಿಸಲು ಮುಂದಾಗಿದ್ದರು.
ತಾಲ್ಲೂಕಿನ ದೊಡ್ಡೇರಹಳ್ಳಿ ರೈತ ಎ. ಪ್ರಭುಗೌಡ ಮಾತನಾಡಿ, ಒಂದು ಎಕರೆ ಜಮೀನಿಗೆ ಮೆಕ್ಕೆಜೋಳ ಬಿತ್ತಲು 10 ಸಾವಿರ ಖರ್ಚು ಮಾಡಲಾಗಿದೆ. ಜಮೀನು ಅಳಿಸಿದರೆ ಮತ್ತೆ 10 ಸಾವಿರ ರೂ. ಖರ್ಚಾಗಲಿದೆ. ಹಾಗಾಗಿ ಮಳೆಗಾಗಿ ಕಾದಿರುವೆ¬ ಎನ್ನುತ್ತಾರೆ.
ಮೆಕ್ಕೆಜೋಳ ಬಿತ್ತಿ 25 ದಿನ ಕಳೆದರೂ ಮಳೆ ಬಂದಿಲ್ಲ. ಜಮೀನನ್ನು ಎರಡು ತಾಸುಗಳಿಂದ ಅಳಿಸುತ್ತಿರುವೆ. ಮತ್ತೆ ಬಿತ್ತಲು 2 ತಾಸುಗಳು ಬೇಕು ಎಂದು ವಸಂತಪ್ಪ ಹುಚ್ಚಪ್ಪ ಮಾಸ್ಟರ್ ಮನೆಯ ಡಿ.ಸಿ. ನಾಗರಾಜಪ್ಪ ಬೇಸರದ ನುಡಿಗಳನ್ನಾಡುತ್ತಾರೆ.
ಹಾಗಾದರೆ ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರೆ, ಸಾಲು ಹೊಡೆದು, ಬೀಜ ಗೊಬ್ಬರ ಹಾಕಬೇಕು. ಸಾಲು ಮುಚ್ಚಲು ಒಳಗುಂಡಿ ಹೊಡೆದು ನಂತರ ಜಮೀನು ಸಮ ಮಾಡಲು ಕೊಲ್ಡು ಹೊಡೆಯುತ್ತೇವೆ ಎನ್ನುತ್ತಾರೆ ಮುಂದೆ ಬರುವ ಮಳೆಯ ನಿರೀಕ್ಷೆಯಲ್ಲಿರುವ ಆ ರೈತ.
– ಮೃತ್ಯುಂಜಯ ಪಾಟೀಲ್