ಮಲೇಬೆನ್ನೂರಿನಲ್ಲಿ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ
ಮಲೇಬೆನ್ನೂರು, ಏ.21- ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿ.ಪಂ. ಸದಸ್ಯ ಹಾಗೂ ಬಿಜೆಪಿ ಮುಖಂಡ ಬಿ.ಎಂ. ವಾಗೀಶ್ ಸ್ವಾಮಿ ಅವರು ಇಂದು ಕೋವಿಡ್ ಲಸಿಕೆ ಹಾಕಿಸಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಗೀಶ್ ಸ್ವಾಮಿ, ಮಲೇಬೆನ್ನೂರು ಪಟ್ಟಣ ಪುರಸಭೆಯ ಜೊತೆಗೆ ಹೋಬಳಿ ಕೇಂದ್ರವೂ ಆಗಿರುವುದರಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗ ಕಳುಹಿಸುತ್ತಿರುವ ಲಸಿಕೆ ಸಾಕಾಗುತ್ತಿಲ್ಲ.
ಪ್ರತಿದಿನ ಕನಿಷ್ಠ 150 ರಿಂದ 200 ಜನರಿಗೆ ಆಗುವಷ್ಟು ಲಸಿಕೆ ಪೂರೈಸುವಂತೆ ಡಿಹೆಚ್ಒ ಡಾ. ಚಂದ್ರಮೋಹನ್ ಅವರನ್ನು ಫೋನ್ ಮೂಲಕ ಒತ್ತಾಯಿಸಿದರು.
ಈ ವಿಷಯವನ್ನು ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಗಮನಕ್ಕೆ ತಂದ ವಾಗೀಶ್ ಸ್ವಾಮಿ ಅವರು, ಗುರುವಾರದಿಂದ ಕನಿಷ್ಟ 150 ಜನರಿಗಾದರೂ ಲಸಿಕೆ ಹಾಕಿಸುವ ವ್ಯವಸ್ಥೆ ಆಗಲಿದೆ ಎಂದರು.
1624 ಜನರಿಗೆ ಲಸಿಕೆ: ಮಾರ್ಚ್ 8 ರಿಂದ ಇದುವರೆಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 1624 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, ನಮಗೆ ಪ್ರತಿದಿನ ಕನಿಷ್ಟ 150 ಜನರಿಗೆ ಲಸಿಕೆಯ ಅವಶ್ಯಕತೆ ಇರುತ್ತದೆ.
ನಿನ್ನೆ ಮತ್ತು ಇಂದು 30 ಜನರಿಗೆ ಮಾತ್ರ ಲಸಿಕೆ ಬಂದಿದೆ. ಇದರಿಂದ ಲಸಿಕೆ ಹಾಕಿಸಿಕೊಳ್ಳಲು ಬಂದ ಜನರಿಗೆ ಸ್ವಲ್ಪ ತೊಂದರೆ ಆಗಿದೆ ಎಂದು ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ತಿಳಿಸಿದರು.
ನಮ್ಮಲ್ಲಿ ಕೊರೊನಾ ಟೆಸ್ಟ್ ಆದವರ ಪೈಕಿ 2ನೇ ಅಲೆಯಲ್ಲಿ ಈವರೆಗೆ 9 ಜನರಿಗೆ ಪಾಸಿಟಿವ್ ಬಂದಿದೆ. ಬುಧವಾರ ಮಲೇಬೆನ್ನೂರು, ಹಾಲಿವಾಣ, ಹರಳಹಳ್ಳಿ ಗ್ರಾಮದ ತಲಾ ಒಬ್ಬರಿಗೆ ಸೋಂಕು ದೃಢ ಪಟ್ಟಿದೆ ಎಂದು ಡಾ. ಲಕ್ಷ್ಮಿದೇವಿ ಮಾಹಿತಿ ನೀಡಿದರು.
ಇದೇ ವೇಳೆ ಪುರಸಭೆ ಸದಸ್ಯರಾದ ಬಿ. ಸುರೇಶ್, ಬಿ.ಹೆಚ್. ಮಂಜಪ್ಪ, ಆಶ್ರಯ ಸಮಿತಿ ಸದಸ್ಯ ಬಿ. ಚಂದ್ರಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಾನಿಪೂರಿ ರಂಗನಾಥ್ ಮತ್ತಿತರರು ಲಸಿಕೆ ಹಾಕಿಸಿಕೊಂಡರು.
ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್, ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ, ಮುಖ್ಯಾಧಿಕಾರಿ ದಿನಕರ್, ಸದಸ್ಯರಾದ ಮಹಾಂತೇಶ್ ಸ್ವಾಮಿ, ಪಿ.ಆರ್. ರಾಜು, ಎ.ಕೆ. ಲೋಕೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಬಿ. ಮಂಜುನಾಥ್, ಎ.ಕೆ. ನಾಗರಾಜ್ ಇನ್ನಿತರರು ಹಾಜರಿದ್ದರು.