ಹುತಾತ್ಮರಾದ ವೀರ ಸೈನಿಕರಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ : ಡಾ.ಸಿಂಧೂ ಪ್ರಶಾಂತ್
ಹರಿಹರ, ಫೆ.21- ಭಾರತದ ಸೈನಿಕರು ಅನ್ಯ ದೇಶಗಳ ಮೇಲೆ ಯುದ್ಧ ಮಾಡುವುದಕ್ಕಿಂತ ಶಾಂತಿ ಸ್ಥಾಪನೆಗೆ ಹೆಚ್ಚು ರಕ್ತ ಹರಿಸಿದ್ದಾರೆ. ಶಾಂತಿ ಸ್ಥಾಪನೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ವೀರ ಸೈನಿಕರ ಬಲಿದಾನ ನಮ್ಮೆಲ್ಲರಿಗೂ ಸ್ಮರಣೀಯವಾದುದು ಎಂದು ಲೇಖಕಿ ಡಾ.ಸಿಂಧೂ ಪ್ರಶಾಂತ್ ತಿಳಿಸಿದರು.
ನಗರದ ಕೋಟೆ ವಿಭಾಗದಲ್ಲಿರುವ ಬಿರ್ಲಾ ಕಲ್ಯಾಣಮಂಟಪದಲ್ಲಿ ಶನಿವಾರ ಸಂಜೆ ಗಣಪಾಸ್ ಇನ್ನೋವೇಟೀವ್ ಗ್ರೂಪ್‍ನಿಂದ ಹಮ್ಮಿಕೊಂಡಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುಲ್ವಾಮಾ ದಾಳಿಯಲ್ಲಿ ತಮ್ಮ ಜೀವವನ್ನೇ ಅರ್ಪಿಸಿದ 40 ಯೋಧರ ಮನೆಗಳಿಗೆ ತೆರಳಿ ಕುಟುಂಬಗಳನ್ನು ಭೇಟಿಯಾಗಿ ಅವರಿಂದ ವಿವರ ಪಡೆದು ದಾಖಲೆ ಮಾಡಿದ್ದೇನೆ ಎಂದರು. ಒಬ್ಬೊಬ್ಬ ಮೃತ ಯೋಧನ ಹಿಂದೆ ರೋಮಾಂಚನ ನೀಡುವ ಕತೆಯಿದೆ ಎಂದು ಕೆಲವು
ಘಟನೆಗಳನ್ನು ತಿಳಿಸಿದರು.
ಹುತಾತ್ಮ ಕೆ.ಜಾವೇದ್ ತಂದೆ ಅಬ್ದುಲ್ ಖಾದರ್ ಅವರು ಡಾ.ಸಿಂಧೂ ಪ್ರಶಾಂತ್ ಅವರು ರಚಿಸಿದ ವೀರಗಾಥೆ ಪುಸ್ತಕ ಬಿಡುಗಡೆ ಮಾಡಿದರು. ಗಣಪಾಸ್ ಇನ್ನೋವೇಟೀವ್ ಗ್ರೂಪ್ ಗೌರವ ಅಧ್ಯಕ್ಷ ಎಚ್.ಎಸ್.ಹೂಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚಿಂತನ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್, ಡಿ.ಫ್ರಾನ್ಸಿಸ್, ಚಿತ್ರಕಲಾವಿದ ಮೆಹಂದಳೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಗೂ ಮುನ್ನ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಹಾಗೂ ಜಾವೇದ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಪಿ.ಧರಣೇಂದ್ರ ಕಾರ್ಯಕ್ರಮ ನಿರೂಪಿಸಿದರು. ಎಂಕೆಇಟಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಶ್ರೀಮತಿ ಸಾವಿತ್ರಿ ಸೂರಜ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಳಗದ ಅಧ್ಯಕ್ಷ ಜಿ.ಕೆ. ವಿನಾಯಕ ಸ್ವಾಗತಿಸಿದರು. ರಘುಶಾಸ್ತ್ರಿ ವಂದಿಸಿದರು.