ದಾವಣಗೆರೆ, ಅ.8- ಐಟಿಐ ತರಬೇತಿದಾರರ ಪರೀಕ್ಷೆಯನ್ನು ಏಕಾಏಕಿ ರದ್ದು ಮಾಡಿರುವ ಕ್ರಮವನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯಿಂದ ನಗರದ ಜಯದೇವ ವೃತ್ತದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಉದ್ಯೋಗ ಮತ್ತು ತರಬೇತಿ ಇಲಾಖೆಯ ಪರೀಕ್ಷಾ ಸಮನ್ವಯಾಧಿಕಾರಿ ಅವರಿಗೆ ಪ್ರತಿಭಟನಾ ನಿರತರು ಮನವಿ ಸಲ್ಲಿಸಿದರು.
ಅಕ್ಟೋಬರ್ 7 ಮತ್ತು 8ರಂದು ನಿಗದಿಯಾಗಿದ್ದ ಐಟಿಐ ಪೂರಕ ಸಿಬಿಟಿ ಪರೀಕ್ಷೆಗಳನ್ನು ಏಕಾಏಕಿ ತಾಂತ್ರಿಕ ಕಾರಣಗಳನ್ನು ನೀಡಿ ರದ್ದುಪಡಿಸಲಾಗಿದೆ. ಇದರಿಂದಾಗಿ ಪರೀಕ್ಷೆ ಬರೆಯಲು ಸಜ್ಜಾಗಿದ್ದ ಐಟಿಐ ತರಬೇತಿದಾರರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಎಐಡಿವೈಓ ಮುಖಂಡ ಪರಶುರಾಮ್ ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ದಿನಾಂಕವನ್ನು ಇಲಾಖೆಯ ಅನುಮೋದನೆಯ ನಂತರ ಪ್ರಕಟಿಸುವುದಾಗಿ ಪರೀಕ್ಷೆ ನಡೆಸುತ್ತಿರುವ ಏಜೆನ್ಸಿಯವರು ತಿಳಿಸಿದ್ದಾರೆ.
ಇದುವರೆಗೆ ಇಲಾಖೆಯಿಂದ ಪರೀಕ್ಷಾರ್ಥಿಗಳಿಗೆ ಯಾವುದೇ ಮಾಹಿತಿ ಬಂದಿಲ್ಲ. ಏಕಾಏಕಿ ಪರೀಕ್ಷೆ ರದ್ದುಗೊಳಿಸಿರುವುದು, ಹಲವಾರು ದಿನಗಳ ಕಾಲ ತಯಾರಿ ನಡೆಸಿ ಪರೀಕ್ಷೆ ಬರೆಯಲು ಸಜ್ಜಾಗಿ ದೂರದ ಊರುಗಳಿಂದ ಬಂದಿರುವ ತರಬೇತಿದಾರರನ್ನು ಸಂಕಷ್ಟಕ್ಕೆ ಈಡು ಮಾಡಿದೆ ಎಂದು ಆಕ್ಷೇಪಿಸಿದರು.
ಕೂಡಲೇ ರದ್ದಾಗಿರುವ ಪೂರಕ ಪರೀಕ್ಷೆಗಳ ದಿನಾಂಕವನ್ನು ನಿಗದಿ ಮಾಡಿ ಶೀಘ್ರದಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ನೀಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅನಿಲ್ ಕುಮಾರ್, ಗುರು, ಐಟಿಐ ವಿದ್ಯಾರ್ಥಿಗಳಾದ ಅರುಣ್, ಸಂತೋಷ್ ಸೇರಿದಂತೆ ಇತರರು ಭಾಗವಹಿಸಿದ್ದರು.