ಜಗಳೂರಿನಲ್ಲಿ ಎಸ್ಎಫ್ಐ ಪ್ರತಿಭಟನೆ
ಜಗಳೂರು, ಅ.8- ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಕಳಪೆ ಕಾಮಗಾರಿ ಹಾಗೂ ವಿದ್ಯಾರ್ಥಿನಿಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ಎಫ್ಐ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಶಾಸಕ ಎಸ್.ವಿ. ರಾಮಚಂದ್ರಪ್ಪ ಹಾಗೂ ಪಂಚಾ ಯತ್ ರಾಜ್ ಇಲಾಖೆಯ ಇಂಜಿನಿಯರ್ ಶಿವಕುಮಾರ್ಗೆ ಮನವಿ ಸಲ್ಲಿಸಿದರು.
ಮುಖಂಡರಾದ ಮಹಾಲಿಂಗಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಅತಿ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಮತ್ತು ಪ್ರತಿಷ್ಠಿತ ಸರ್ಕಾರಿ ಕಾಲೇಜಿನ ವಿದ್ಯಾ ರ್ಥಿಗಳ ಹಿತದೃಷ್ಟಿಯಿಂದ ಶಾಸಕರು 96 ಲಕ್ಷ ರೂ. ಮೊತ್ತದಲ್ಲಿ 2018ರಲ್ಲಿ ಮೂರು ಕೊಠಡಿ ಗಳು, ಎರಡು ವಿಜ್ಞಾನ ಪ್ರಯೋಗಾಲಯ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿದೆ.
ಕಟ್ಟಡ ಕಾಮಗಾರಿ ಮುಕ್ತಾಯವಾಗಿದ್ದು, ಅತ್ಯಂತ ಕಳಪೆ ಮಟ್ಟದ ಕಾಮಗಾರಿಯನ್ನು ಮಾಡಿದ್ದಾರೆ. ಅಲ್ಲದೆ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ, ಬಳಕೆ ಮಾಡಲು ಅವಕಾಶ ನೀಡದಿರುವುದು ವಿದ್ಯಾರ್ಥಿಗಳಿಗೆ ಅನುಮಾನಕ್ಕೆ ಆಸ್ಪದವಾಗಿದೆ. ಸುಮಾರು 1,500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿನಲ್ಲಿ ಕೇವಲ ಒಂದು ಶೌಚಾಲಯವಿದ್ದು, ವಿದ್ಯಾರ್ಥಿನಿಯರು ತರಗತಿ ಚಟುವಟಿಕೆ ತೊರೆದು ಸಾಲುಗಟ್ಟಿ ನಿಲ್ಲಬೇಕಿದೆ.
ಶಾಸಕರು ಇತ್ತ ಗಮನಹರಿಸಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಈಗಾಗಲೇ ನಿರ್ಮಾಣವಾಗಿರುವ ಕಳಪೆ ಕಾಮಗಾರಿಯನ್ನು ಸರಿಪಡಿಸಬೇಕು. ಇಲ್ಲವಾದರೆ ಎಸ್ಎಫ್ಐ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವು ದು ಎಂದು ಮಹಾಲಿಂಗಪ್ಪ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ವಕೀಲ ಆರ್. ಓಬಳೇಶ್ , ಎಸ್ಎಫ್ಐ ಜಿಲ್ಲಾ ಸಂಚಾಲಕ ಅನಂತರಾಜ್, ತಾಲ್ಲೂಕು ಅಧ್ಯಕ್ಷ ತಮಲೇಹಳ್ಳಿ ಅಂಜಿನಪ್ಪ, ಪದಾಧಿಕಾರಿಗಳಾದ ಹೊನ್ನಮರಡಿ ರಾಜು, ಅಶ್ವಿನಿ, ತೇಜಸ್ವಿನಿ, ಅಂಬಿಕಾ, ಮಧು ಕುಮಾರ್, ಶಿವರಾಜ್, ಮಹಾಲಕ್ಷ್ಮಿ ಇನ್ನಿತರರು ಹಾಜರಿದ್ದರು.