ಕಾರ್ಯಕ್ರಮದ ಸಿದ್ಧತೆಗಾಗಿ ಅಧಿಕಾರಿಗಳ ಸಭೆ ನಡೆಸಿದ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್
ಹೊನ್ನಾಳಿ, ಅ.8- ಸಾರ್ವಜನಿಕರ ಅಹವಾಲು ಸ್ವೀಕರಿಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಕೋವಿಡ್ನಿಂದ ನಿಲುಗಡೆಯಾಗಿದ್ದು, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಸುರಹೊನ್ನೆ ಹಾಗೂ ಕುಂದೂರು ಗ್ರಾಮಗಳಿಂದ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಚಾಲನೆಯಾಗಲಿದೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ಶ್ರೀಮತಿ ಮಮತ ಹೊಸಗೌಡರ್ ತಿಳಿಸಿದ್ದಾರೆ.
ತಾಲ್ಲೂಕು ಸಭಾಂಗಣದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಅವರುಗಳು ಇದೇ ದಿನಾಂಕ 16 ರಂದು ಆಗಮಿಸಲಿದ್ದು, ಶಿಶು ಅಭಿವೃದ್ಧಿ ಇಲಾಖೆ ಯೋಜನೆಯ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಸವಲತ್ತುಗಳು ಮತ್ತು ಬಾಕಿ ಇರುವ ಯೋಜನೆಗಳು, ಸವಲತ್ತುಗಳನ್ನು ಜನರಿಗೆ ತಲುಪುವಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಕೋವಿಡ್ನಿಂದ ಬಿಪಿಎಲ್ ಕಾರ್ಡುದಾರರ ಮನೆಯ ಮುಖ್ಯಸ್ಥ ಸಾವನ್ನಪ್ಪಿದಲ್ಲಿ ಸರ್ಕಾರದಿಂದ 1 ಲಕ್ಷ ರೂ. ಪರಿಹಾರದ ಚೆಕ್ಕನ್ನು ಮುಖ್ಯಮಂತ್ರಿಗಳಿಂದ ಕೊಡಿಸಲು ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕಿನ ಫಲಾನುಭವಿಗಳ ಮಾಹಿತಿಗಳನ್ನು ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಸಭೆಗೆ ಕಾರ್ಮಿಕ ಅಧಿಕಾರಿ ಬಾರದಿರುವುದರಿಂದ ಅವರಿಗೆ ನೋಟಿಸ್ ಜಾರಿ ಮಾಡಿ ಎಂದು ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ಗೆ ಸೂಚಿಸಿದರರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಸವನಗೌಡ ಕೋಟೂರ, ನ್ಯಾಮತಿ ತಹಶೀಲ್ದಾರ್ ತನುಜಾ ಸೌದತ್ತಿ, ಉಪ ತಹಶೀಲ್ದಾರ್ ನಾಗರಾಜ್, ಸಿಪಿಐ ದೇವರಾಜ್, ಪಿಎಸ್ಐ ಬಸವನಗೌಡ ಬಿರಾದಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಆರ್. ಬಂತಿ, ಬಿಇಓ ರಾಜೀವ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜು, ಕೃಷಿ ಅಧಿಕಾರಿ ಸುರೇಶ್ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.