ದಾವಣಗೆರೆ, ಫೆ. 19 – ನಗರದ ಎಂ.ಸಿ.ಸಿ. ಬಿ ಬ್ಲಾಕ್‌ನ ನಾಲ್ಕನೇ ಮುಖ್ಯರಸ್ತೆಯ ಒಂಭತ್ತನೇ ತಿರುವಿನಲ್ಲಿರುವ ದೂಡಾ ಪಾರ್ಕ್‌ನಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ ಒತ್ತುವರಿ ಮಾಡಿದ್ದನ್ನು ಶುಕ್ರವಾರ ತೆರವುಗೊಳಿಸಲಾಗಿದೆ. ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರ ನೇತೃತ್ವದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಪತರ್ಕಕರ್ತರಿಗೆ ವಿವರ ನೀಡಿರುವ ಶಿವಕುಮಾರ್, ಸರ್ವೇ ನಂಬರ್ 207/1ಎ4 ರಲ್ಲಿ ದೂಡಾ ಅನುಮತಿ ಪಡೆದು 28 ನಿವೇಶನಗಳ ಬಡಾವಣೆ ರೂಪಿಸಲಾಗಿತ್ತು. ಆದರೆ, ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ 215x230x12 ಅಡಿ ಜಾಗದಲ್ಲಿದ್ದ ಪಾರ್ಕ್‌ನಲ್ಲಿ ಎರಡು ನಿವೇಶನಗಳನ್ನು ಅಕ್ರಮವಾಗಿ ಸೃಷ್ಟಿಸಲಾಗಿತ್ತು. ಈ ನಿವೇಶನದ ಪೈಕಿ ಒಂದರಲ್ಲಿ ಅಡಿಪಾಯವನ್ನೂ ಹಾಕಲಾಗಿತ್ತು. ಅದನ್ನು ಜೆ.ಸಿ.ಬಿ.ಯಿಂದ ತೆಗೆಸಲಾಗಿದೆ ಎಂದು ತಿಳಿಸಿದರು.
ಪಾರ್ಕ್‌ನ ಇತರೆ ಜಾಗವನ್ನೂ ಸಹ ನಿವೇಶನಗಳೆಂದು ಮಾರಲು ಪ್ರಯತ್ನ ನಡೆಸಿರುವ ಸಾಧ್ಯತೆ ಇದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಾರ್ಕ್ ಜಾಗವನ್ನು ದೂಡಾ ವತಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಸ್ಥಳೀಯ ರಾಜಮೋಹನ್ ಎಂಬುವವರು, ನಾನೇ ಈ ಹಿಂದೆ ಜಾಗವನ್ನು ಖರೀದಿಸಿ ಅಡಿಪಾಯ ಹಾಕಿದ್ದು. ಆಗ ಪಾಲಿಕೆ ಅಧಿಕಾರಿಗಳು ಮನೆ ಕಟ್ಟಿಕೊಳ್ಳಲು ಅನುಮತಿ ನೀಡಿದ್ದರು. ಆಗ ಅವರ ಬಳಿ ದೂಡಾದ ದಾಖಲೆಗಳು ಇರಲಿಲ್ಲವೇ? ಪಾಲಿಕೆ ಅಧಿಕಾರಿಗಳು ಅನುಮತಿ ನೀಡುವ ಮೂಲಕ ತಪ್ಪು ಮಾಡಿದ್ದು ಅವರ ವಿರುದ್ಧ ಕ್ರಮವಿಲ್ಲವೇ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಶಿವಕುಮಾರ್, ಯಾರೇ ಆಗಲಿ ನಿವೇಶನ ಖರೀದಿಸುವಾಗ ಇಲ್ಲವೇ ಮನೆ ಕಟ್ಟಿಸುವಾಗ ದೂಡಾದ ಬಳಿ ದಾಖಲೆ ಪರಿಶೀಲಿಸಿಕೊಳ್ಳಬೇಕು. ದೂಡಾದ ಜಾಗದಲ್ಲಿ ಮನೆ ಕಟ್ಟಿದವರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರು ವಂಚನೆಗೆ ಗುರಿಯಾಗಿದ್ದಾರೆ ಎಂಬ ಭಾವನೆಯಿಂದ ಅನುಕಂಪ ತೋರಿಸಿ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿಲ್ಲ ಎಂದು ಹೇಳಿದರು.
ತೆರವುಗೊಳಿಸಲಾಗಿರುವ ಪಾರ್ಕ್ ಅಭಿವೃದ್ಧಿಪಡಿಸಿ ಅನುಕೂಲ ಮಾಡಿಕೊಂಡುವಂತೆ ಸ್ಥಳೀಯರಾದ ಸಿ.ಜಿ. ಉಮೇಶ್, ಅನಿತ ಮತ್ತಿತರರು ಮನವಿ ಮಾಡಿಕೊಂಡಿದ್ದಕ್ಕೆ ಸ್ಪಂದಿಸಿದ ಶಿವಕುಮಾರ್, ದೂಡಾ ವತಿಯಿಂದ ಮೂರ್ನಾಲ್ಕು ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಪಾರ್ಕನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ದೂಡಾ ಸದಸ್ಯೆ ದೇವೀರಮ್ಮ, ಎಇಇ ಶ್ರೀಕರ್, ದೂಡಾ ಇಂಜಿನಿಯರ್ ಅಕ್ಷತ ಮತ್ತಿತರರು ಉಪಸ್ಥಿತರಿದ್ದರು.