ಮಲೇಬೆನ್ನೂರು, ಫೆ.18- ಕಂದಾಯ ಸಚಿವ ಆರ್. ಅಶೋಕ್ ಅವರ ಸೂಚನೆಯಂತೆ ತಿಂಗಳ ಪ್ರತಿ 3ನೇ ಶನಿವಾರ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದು, ಹರಿಹರ ತಾಲ್ಲೂಕಿನಲ್ಲಿ ವಾಸ್ತವ್ಯಕ್ಕೆ ನಿಟ್ಟೂರು ಗ್ರಾಮವನ್ನು ಆಯ್ಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಉಪತಹಶೀಲ್ದಾರ್ ಆರ್. ರವಿ ಅವರು ನಿಟ್ಟೂರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯದ ಸಿದ್ಧತೆ ಕುರಿತು ಪೂರ್ವಭಾವಿಯಾಗಿ ಸ್ಥಳ ಪರಿಶೀಲಿಸಿದರು.
ಸರ್ಕಾರಿ ಪ್ರೌಢಶಾಲೆ ಆವರಣವನ್ನು ಕಾರ್ಯಕ್ರಮಕ್ಕೆ ನಿಗದಿ ಮಾಡಿದ್ದು, ಅಲ್ಲಿ ಅರ್ಜಿ ಸ್ವೀಕರಿಸುವ ಸ್ಥಳ, ಆರೋಗ್ಯ ತಪಾಸಣೆ ಕೇಂದ್ರ, ಆಧಾರ್ ಕೇಂದ್ರಗಳನ್ನು ಗುರುತು ಮಾಡಿದರು.
ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರ್ಜಿ ಸ್ವೀಕಾರ, ನಂತರ ವಿವಾದದ ಸ್ಥಳಗಳಿದ್ದರೆ ಪರಿಶೀಲನೆ. ಸಾಯಂಕಾಲ 4 ರಿಂದ ವೇದಿಕೆ ಕಾರ್ಯಕ್ರಮ ಮಾಡಿ ಫಲಾನುಭವಿಗಳಿಗೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸೌಲಭ್ಯಗಳನ್ನು ವಿತರಿಸಲಾಗುವುದೆಂದು ಉಪತಹಶೀಲ್ದಾರ್ ರವಿ ಮಾಹಿತಿ ನೀಡಿದರು. ಗ್ರಾಮದಲ್ಲಿ ಚರಂಡಿ, ರಸ್ತೆ ಸ್ವಚ್ಛತೆ ಹಾಗೂ ರಸ್ತೆ ಪಕ್ಕದಲ್ಲಿರುವ ತಿಪ್ಪೆಗಳ ತೆರವಿಗೆ ಗ್ರಾ.ಪಂ. ಗೆ ಸೂಚನೆ ನೀಡಲಾಯಿತು.
ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್, ಗ್ರಾಮಸೇವಕ ಮಾರುತಿ ಹಾಗೂ ಶಾಲಾ ಶಿಕ್ಷಕರು ಈ ವೇಳೆ ಹಾಜರಿದ್ದರು.