ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ

 ಹರಪನಹಳ್ಳಿ, ಫೆ.18 – ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು  ರದ್ದು ಪಡಿಸಬೇಕು. ದೆಹಲಿಯಲ್ಲಿ  ಹೋರಾಡುತ್ತಿರುವ  ರೈತರಿಗೆ ಬೆಂಬಲ ಸೂಚಿಸಲು  ಸುಗ್ರೀವಾಜ್ಞೆ ಮುಖಾಂತರ  ತಂದಿರುವ  ಈ ತಿದ್ದುಪಡಿಗಳನ್ನು ಹಿಂಪಡೆಯ ಬೇಕು. ರೈತರ  ಹಿತಾಸಕ್ತಿಗಳನ್ನು ಕಾಪಾಡಬೇ ಕೆಂದು  ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್‍ಎಸ್‍ಯುಐ ಮಹಿಳಾ ಸಂಘಟನೆಗಳು. ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ  ತಾಲ್ಲೂ ಕಿನ ದೇವರ ತಿಮ್ಮಲಾಪುರದ  ವೆಂಕಟೇಶ್ವರ ದೇವಸ್ಥಾನದಿಂದ ಬೃಹತ್ ಟ್ರ್ಯಾಕ್ಟರ್ ಆಟೋ, ಒಂಟೆತ್ತಿನ ಬಂಡಿಗಳ ರಾಲಿ ಮತ್ತು ಪಾದಯಾತ್ರೆ ಯು ಹರಪನಹಳ್ಳಿ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಮಿನಿ ವಿಧಾನಸೌದಕ್ಕೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.    

ಈ ವೇಳೆ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಎಂ.ಪಿ.ವೀಣಾ ಮಹಾಂತೇಶ್‍ ಚರಂತಿಮಠ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ದೇಶದ ಹಾಗೂ ರಾಜ್ಯದ ಜನರನ್ನು ಲೂಟಿ  ಮಾಡುತ್ತಿದೆ. ಇಂಧನ. ತೈಲ ಬೆಲೆ ಗಗನಕ್ಕೇರುತ್ತಿದೆ. ಅಡುಗೆ ಅನಿಲ ದುಬಾರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಹೆಚ್ಚಿನ ತೆರಿಗೆ ಹೊರೆ ಹೇರಿವೆ. ರೈತರು ಮಧ್ಯಮ ವರ್ಗದವರಿಂದ ಕಳೆದ ಆರೂವರೆ ವರ್ಷದಲ್ಲಿ 20 ಲಕ್ಷ ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಕಿಡಿ ಕಾರಿದರು.

ಅದಾನಿ, ಅಂಬಾನಿ, ರಿಲಯನ್ಸ್, ಬಿಗ್‍ಬಜಾರ್, ಅಮೆಜಾನ್, ಫ್ಲಿಫ್‍ಕಾರ್ಟ್, ವಾಲ್‍ಮಾರ್ಟ್‍ನಂತಹ ದೈತ್ಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ರೈತರ ಕೊರೊನಾ ಸಂಕಷ್ಟದ ಸಮಯವನ್ನು ಸರ್ಕಾರ ಬಳಸಿಕೊಂಡಿದೆ. ಬಹುರಾಷ್ಟ್ರೀಯ ದೊಡ್ಡ ಕಂಪನಿಗಳಿಗೆ ಅವಕಾಶ ಮಾಡಿಕೊಡುವುದರಿಂದ ರೈತರ ಹಿತವನ್ನು ಬಲಿಕೊಟ್ಟಂತಾಗುತ್ತದೆ. ಜೊತೆಗೆ ರೈತರು ಮೊದಲು ಹೆಚ್ಚಿನ ಬೆಲೆಗೆ ಖರೀದಿಸುವ ಈ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಸಣ್ಣಪುಟ್ಟ ಖರೀದಿದಾರರು ವ್ಯಾಪಾರದಿಂದ ದೂರ ಉಳಿಯುತ್ತಾರೆ. ಶತಮಾನಗಳಿಂದ ಕೊಂಡಿಯಂತಿರುವ ರೈತರು ಹಾಗೂ ವ್ಯಾಪಾರಸ್ಥರನ್ನು ಬೇರೆ ಮಾಡುವುದೇ ಸುಗ್ರೀವಾಜ್ಞೆಯ ಉದ್ದೇಶದಂತಿದೆ ಎಂದು ಹೇಳಿದರು.

ಪ್ರಗತಿಪರ ಸಂಘಟನೆಯ ಹೊಸಹಳ್ಳಿ ಮಲ್ಲೇಶ್ ಮಾತನಾಡಿ, ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು. ಜನಸಾಮಾನ್ಯರಿಗೆ ಅಗತ್ಯವಾಗಿರುವ ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಪುರಸಭೆ ಮಾಜಿ ಅಧ್ಯಕ್ಷರಾದ ಕವಿತಾ ವಾಗೀಶ್, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್‍ ಅಧ್ಯಕ್ಷ ಹೆಚ್.ಶಿವರಾಜ್, ವಕೀಲ ಕರೆಗೌಡರ ಸಿದ್ಧಲಿಂಗನ ಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಬಳಿಗನೂರು ಕೊಟ್ರೇಶ್, ಎ.ಡಿ.ದ್ವಾರಕೇಶ್ ಮಹಿಳಾ ಸಂಘದ ಶಂಷಾದ್ ಬೇಗಂ, ಭಾಗ್ಯಮ್ಮ, ಗಾಯಿತ್ರಮ್ಮ, ಪೂಜಾರ್‍ ಆನಂದ, ಮನೋಜ್, ದಾದಾಪೀರ್, ತಿಮ್ಮಲಾಪುರದ ನಾಗರಾಜ್, ಹನುಮಕ್ಕ, ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿಯ ಮೌಲ್ವಿ ಖಾಜಾ ಮುಸ್ತಾಕ್ ಅಹ್ಮದ್‌ ರಜ್ವಿ ಸೇರಿದಂತೆ ಇನ್ನೂ ಅನೇಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

error: Content is protected !!