ಇಂಡಿಯನ್ ಬ್ಯಾಂಕ್ ಮುಂದೆ ರೈತರ ಧರಣಿ

ರಾಣೇಬೆನ್ನೂರು : ಸಾಲ ಮನ್ನಾ ಹಣ ಜಮೆ ಮಾಡುವಂತೆ ಒತ್ತಾಯ

ರಾಣೇಬೆನ್ನೂರು, ಏ.19- ಸಾಲ ಮನ್ನಾ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಲು ವಿಳಂಬ  ಧೋರಣೆ ಅನುಸರಿಸುತ್ತಿರುವ ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕರ ವರ್ತನೆ ಖಂಡಿಸಿ ನಮ್ಮ ಭೂಮಿ, ನಮ್ಮ ಜೀವ ರೈತಪರ ಹೋರಾಟ ಸಮಿತಿ ಮತ್ತು ತಾಲ್ಲೂಕಿನ ರೈತರು ಇಂದು ಬ್ಯಾಂಕ್‌ನ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಎಸ್.ಡಿ. ಹಿರೇಮಠ ಮಾತನಾಡಿ, ಬ್ಯಾಂಕಿನವರು ಇದುವರೆಗೂ ರೈತರ ಸಾಲ ಮನ್ನಾ ಹಣ ಜಮೆ ಮಾಡದೆ, ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಕುರಿತಂತೆ ಹಲವು ಬಾರಿ ಧರಣಿ, ಹೋರಾಟ, ಪ್ರತಿಭಟನೆ ನಡೆಸಿದಾಗಲೂ ಏನೋ ಒಂದು  ಕಾರಣಗಳನ್ನು ನೀಡಿ ಸಾಗು ಹಾಕುತ್ತಿದ್ದಾರೆ. ಏ.15 ರೊಳಗಾಗಿ ರೈತರ ಖಾತೆಗಳಿಗೆ ಹಣ ಜಮೆ ಮಾಡುವುದಾಗಿ ಲಿಖಿತ ಭರವಸೆ ನೀಡಿದ್ದರೂ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ದೂರಿದರು.

ಇಲ್ಲಿಯವರೆಗೂ ಈ ಬ್ಯಾಂಕಿನ ವ್ಯವಸ್ಥಾಪಕರು ಹಣ ಹಾಕದೆ, ಯಾವುದೇ ವಿಷಯವನ್ನು ತಿಳಿಸದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಇದರ ಬಗ್ಗೆ ವಿಚಾರಿಸಿದರೆ ತಮಗೆ ಸಂಬಂಧವಿಲ್ಲ, ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ, ಅವರ ಆದೇಶ ಮಾರ್ಗದರ್ಶನದಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮ ಕೈಯಲ್ಲಿ ಏನೂ ಇಲ್ಲ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪರಿ ಹಾರದ ಹಣ ಜಮೆ ಆಗುವವರೆಗೂ ರೈತರು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.

ಸ್ಥಳಕ್ಕೆ ಧಾವಿಸಿದ ಸಿಪಿಐ ಎಂ.ಬಿ. ಗೌಡಪ್ಪಗೌಡ್ರ, ಪಿಎಸ್‍ಐ ಪ್ರಭು ಕೆಳಗಿನಮನಿ ಮತ್ತು ಪೊಲೀಸ್ ಸಿಬ್ಬಂದಿ ಪ್ರತಿಭಟನಾ ನಿರತರನ್ನು ಮನವೊಲಿಸಲು ಪ್ರಯತ್ನಿಸಿದರು. ಕೋವಿಡ್ ನಿಯಮಾವಳಿ ಮತ್ತು ಸರಕಾರದ ಆದೇಶದಂತೆ ಸಾರ್ವಜನಿಕವಾಗಿ ಯಾವುದೇ ಧರಣಿ, ಪ್ರತಿಭಟನೆ ನಡೆಸುವಂತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗಲೇ ಸ್ಥಳ ಬಿಟ್ಟು ತಮ್ಮ ತಮ್ಮ ಗ್ರಾಮಗಳಿಗೆ ತೆರಳಬೇಕೆಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ರೈತರು ಪರಿಹಾರ ಸಿಗುವವರೆಗೂ ತಾವು ಇಲ್ಲಿಂದ ತೆರಳುವುದಿಲ್ಲ ಎಂದು ಹಠ ಹಿಡಿದು ಕುಳಿತರು.

ಅಂತಿಮವಾಗಿ ಎಸ್.ಡಿ.ಹಿರೇಮಠ ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕರೊಂದಿಗೆ ಸಮಾಲೋಚನೆ ನಡೆಸಿ, ಮೇಲಾಧಿಕಾರಿಗಳ ಆದೇಶದಂತೆ ತಾವು ಕ್ರಮ ಕೈಗೊಳ್ಳುವುದಾಗಿ ವ್ಯವಸ್ಥಾಪಕ ವೆಂಕಟೇಶ್ ಅವರು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. 

ಮಲ್ಲಿಕಾರ್ಜುನ ಹಲಗೇರಿ, ಹನುಮಂತಪ್ಪ ಕಬ್ಬಾರ, ದಿಳ್ಳೆಪ್ಪ ಸತ್ಯಪ್ಪನವರ, ಬಸವರಾಜ ಕೊಂಗಿ, ರಾಮಪ್ಪ ಸುಂಕಾಪುರ, ಕುಬೇರಪ್ಪ ಹುಲಿಹಳ್ಳಿ, ಬೀರೇಶ ಪೂಜಾರ, ಸಂಜೀವರಡ್ಡಿ ಹುಲಿಹಳ್ಳಿ, ಕಿರಣ ಪೂಜಾರ, ಹೇಮಪ್ಪ ಸುಂಕಾಪುರ, ವೆಂಕನಗೌಡ ಜೀವನಗೌಡ್ರ, ಲಿಂಗರಡ್ಡಿ, ನಾಗೇಂದ್ರಪ್ಪ ಪೂಜಾರ, ವೆಂಕಪ್ಪ ವಡೇರಹಳ್ಳಿ ಸೇರಿದಂತೆ ಹಲಗೇರಿ, ನಂದಿಹಳ್ಳಿ, ಅಂತರವಳ್ಳಿ, ಲಿಂಗದೇವರಕೊಪ್ಪ, ಹಾರೋಗೊಪ್ಪ ಮತ್ತಿತರೆ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!