ಕುಂಬಾರ ಗುಂಡಯ್ಯ ಗುರುಪೀಠದ ಗಣಪತಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಮುರುಘಾ ಶರಣರು
ಸಮ ಸಮಾಜದ ನಿರ್ಮಾಣ ದಿಂದ ಮಾತ್ರ ದುರ್ಬಲರಿಗೆ ಶಕ್ತಿ. – ಶ್ರೀ ಆದಿಚುಂಚನಗಿರಿ ಸ್ವಾಮೀಜಿ ಅಭಿಮತ
ಚಿತ್ರದುರ್ಗ, ಫೆ.16- ಪ್ರಬಲರು ದುರ್ಬಲರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದಾಗ ಮಾತ್ರ ದುರ್ಬಲರು ಪ್ರಗತಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಮತ್ತು ಚಿತ್ರದುರ್ಗದ ಮುರುಘಾಮಠ ಕೆಲಸ ಮಾಡುತ್ತಾ ಬಂದಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಇಲ್ಲಿಗೆ ಸಮೀಪದ ಕುಂಬಾರ ಗುಂಡಯ್ಯ ಗುರುಪೀಠದಲ್ಲಿ ಶ್ರೀ ಗಣಪತಿ ದೇವಸ್ಥಾನದಲ್ಲಿ ನಿನ್ನ ಏರ್ಪಾಡಾಗಿದ್ದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ, ಶರಣರು ಆಶೀರ್ವಚನ ನೀಡಿದರು.
ಕೃಷಿಯಷ್ಟೇ ಮುಖ್ಯವಾದದ್ದು ಕುಂಬಾರ ಕಲೆ. ರೈತ ಬೆಳೆದ ಭತ್ತ, ಜೋಳ, ರಾಗಿ ಇತ್ಯಾದಿ ಆಹಾರ ಬೆಳೆಗಳನ್ನು ಬೇಯಿಸಿ ಊಟ ಮಾಡಲು ಕುಂಬಾರ ಸಿದ್ಧಪಡಿಸಿದ ಮಡಕೆ ಬಹಳ ಮುಖ್ಯವಾಗಿದೆ. ಅಂತಹ ಕುಂಬಾರ ಕಲೆ ಬಹಳ ಪ್ರಾಚೀನವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಂಬಾರ ಸಮಾಜದ ಗುಂಡಯ್ಯನವರನ್ನು ಅಂದು ಬಸವಣ್ಣನವರು ಗುರುತಿಸಿದ್ದರು. ಇಂದು ಈ ಸಮಾಜದ ಸಂಘಟನೆಗಾಗಿ ನಾವು ಗುರುಗಳನ್ನು ನೀಡಿದ್ದೇವೆ. ಸಣ್ಣ ಸಮಾಜಗಳು ಸಂಘಟನೆ-ಶಕ್ತಿ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಮೀಸಲಾತಿಯ ಕಾಲ ಹಿಂದಿತ್ತು. ಈಗ ಅದೇ ಮೀಸಲಾತಿಯ ಕಾಲ ಬಂದಿದೆ. ಎಲ್ಲಾ ಸಮಾಜದವರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪನವರು ಕೂಡಾ ಹೋರಾಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಶರಣರು ನುಡಿದರು.
ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಣ್ಣನವರ ಸಮ ಸಮಾಜ ನಿರ್ಮಾಣವಾದಾಗ ಮಾತ್ರ ದುರ್ಬಲ ಸಮಾಜಗಳಿಗೆ ಶಕ್ತಿ ಬರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಸಣ್ಣ ಸಮುದಾಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕುಂಬಾರ ಸಮಾಜ ಬಹಳ ಪ್ರಾಚೀನ ಕಲೆ, ಸಂಸ್ಕೃತಿ ಹೊಂದಿದ್ದು, ಸಮಾಜದ ಕುಲಕಸುಬುಗಳಿಗೆ ಸರ್ಕಾರ ಬೆಂಬಲ ನೀಡಬೇಕೆಂದು ಸ್ವಾಮೀಜಿ ಹೇಳಿದರು. ಮೈಸೂರು ಸಂಸ್ಥಾನದಲ್ಲಿ ಒಕ್ಕಲಿಗ ಸಮಾಜದ ಕೆ.ಹೆಚ್. ರಾಮಯ್ಯ ಅವರು ಹಿಂದುಳಿದ ಸಮಾಜಗಳ ಪರವಾಗಿ ಅಂದೇ ಕೆಲಸ ಮಾಡಿದ್ದರೆಂದು ಶ್ರೀಗಳು ಸ್ಮರಿಸಿದರು.
ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ನಶಿಸಿ ಹೋಗುತ್ತಿರುವ ಕುಂಬಾರರ ಕಲೆಯನ್ನು ಉಳಿಸಿ, ಬೆಳೆಸಬೇಕು. ಈ ಸಮುದಾಯದ ನಿರ್ಮಾಣಕ್ಕೆ ನಾನು ಸಚಿವನಾಗಿದ್ದಾಗ 50 ಲಕ್ಷ ರೂಪಾಯಿ ಅನುದಾನ ನೀಡಿದ್ದೆ ಎಂದರು.
ಶಾಸಕ ಹೆಚ್. ತಿಪ್ಪಾರೆಡ್ಡಿ ಮಾತನಾಡಿದರು. ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಬಸವ ಕುಂಬಾರ ತಿಪ್ಪೇಸ್ವಾಮೀಜಿ, ಶ್ರೀ ಬಸವ ಕುಂಬಾರಮೂರ್ತಿ ಸ್ವಾಮೀಜಿ, ಶ್ರೀ ಬಸವ ಕುಂಬಾರ ಗುಂಡಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು.
ಕುಂಬಾರ ಗುರುಪೀಠದ ಅಧ್ಯಕ್ಷ ನರಸಿಂಹಪ್ಪ, ಕುಂಬಾರ ಮಹಾಸಭಾದ ರಾಜ್ಯಾಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ, ನೌಕರರ ಸಂಘದ ಶ್ರೀನಿವಾಸ್, ತಿಪ್ಪೇಸ್ವಾಮಿ, ನಿಟ್ಟೂರಿನ ಕೆ. ಏಕಾಂತಪ್ಪ, ಕೆ. ಸಂಜೀವಮೂರ್ತಿ, ದಾವಣಗೆರೆಯ ಕೆ.ಎನ್. ಚಂದ್ರಶೇಖರ್, ನಾಗರಾಜ್ ಕುಂಬಾರ, ಮುಸ್ಟೂರಪ್ಪ, ಹಿಂಡಸಘಟ್ಟ ತಿಪ್ಪೇಸ್ವಾಮಿ, ಜಿ. ಬೇವಿನಹಳ್ಳಿಯ ಹೆಚ್.ಬಿ. ಶ್ರೀಕಾಂತ್, ಜಿಗಳಿಯ ಜಿ. ಆನಂದಪ್ಪ, ಪತ್ರಕರ್ತ ಪ್ರಕಾಶ್ ಇನ್ನಿತರರಿದ್ದರು.