ಐದು ವರ್ಷದ ಗ್ರಾ.ಪಂ. ಆಡಳಿತಕ್ಕೆ 5 ದಿನಗಳ ತರಬೇತಿ

ಹೊನ್ನಾಳಿ ತಾಲ್ಲೂಕಿನ ಅರಕೆರೆ, ಅರಬಗಟ್ಟೆ, ಹರಳಹಳ್ಳಿ, ಹನುಮ ಸಾಗರ ಗ್ರಾ.ಪಂ.  ಸದಸ್ಯರಿಗೆ ತರಬೇತಿ

ಹೊನ್ನಾಳಿ, ಫೆ.16- ಮಾಧ್ಯಮದಲ್ಲಿ ತಿಳಿದಂತೆ ಒಂದೆಡೆ 88 ವರ್ಷದ ವೃದ್ಧೆ ಪಂಚಾಯಿತಿ ಸದಸ್ಯೆ. ಆದರೆ ಸಮೀಪದ ಜಗಳೂರು ತಾಲ್ಲೂಕಿನ ಸೊಕ್ಕೆ  ಪಂಚಾಯ್ತಿಯಲ್ಲಿ ಅಮೇರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂಜಿನಿಯರ್ ಒಬ್ಬರು  ಬಂದು ಪಂಚಾಯ್ತಿ ಅಧ್ಯಕ್ಷೆ ಆಗುತ್ತಾರೆ ಎಂದರೆ ಪಂಚಾಯಿತಿ ಸದಸ್ಯರ ಹಾಗೂ ಅಧ್ಯಕ್ಷರ ಆಯ್ಕೆಗೆ ಪ್ರಸ್ತುತ ದಿನಗಳಲ್ಲಿ  ಎಷ್ಟು ಮಹತ್ವ ಹಾಗೂ ಆಕರ್ಷಣೆಗೆ ಒಳಗೊಂಡಿದೆ ಎಂಬುದನ್ನು ತಿಳಿಯಬೇಕಿದೆ ಎಂದು ಹೊನ್ನಾಳಿ ಇಒ ಗಂಗಾಧರ ಮೂರ್ತಿ ಹೇಳಿದರು.

ಮಂಗಳವಾರ ಸಾಮರ್ಥ್ಯ ಸೌಧದಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್  ರಾಜ್ ಸಂಸ್ಥೆ ಮೈಸೂರು ಇವರ ಆಶ್ರಯದಲ್ಲಿ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿ ಗಳಿಗೆ ನಡೆದ ತರಬೇತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊನ್ನಾಳಿ ಸೇರಿದಂತೆ 176 ತಾಲ್ಲೂಕುಗಳಲ್ಲಿ ಈ ತರಬೇತಿ ನಡೆಯುತ್ತಿದ್ದು, ಸ್ಥಾಯಿ ಸಮಿತಿ ನಂತರವೇ ಸಾಮಾನ್ಯ ಸಭೆಗೆ ಸಿದ್ಧತೆಗಳಾಗಬೇಕಿದೆ. ಸಭೆಯ ಹಿಂದಿನ ದಿನಗಳಲ್ಲಿ ತುರ್ತಾಗಿ ಚಿಂತಿಸಿ ಸಭೆ ನಿಗದಿಗೊಳಿಸುವ ಕ್ರಮ ಕೈಗೊಳ್ಳುವುದು ನಿಲ್ಲಬೇಕು.  ಹೆಚ್ಚು ಸಮಯ ತರಬೇತಿಯಲ್ಲಿ ಸದಸ್ಯರು  ತೊಡಗಿಸಿಕೊಂಡಿದ್ದೇ ಆದರೆ  ಮುಂದೆ ಒಗ್ಗಟ್ಟಿನಿಂದ ಪಂಚಾಯ್ತಿ  ಕಾಮಗಾರಿ ಆರಂಭಿಸಲು ಸಾಧ್ಯ ಎಂದರು.

ಸಿಡಿಪಿಒ ಮಹಾಂತಸ್ವಾಮಿ ಮಾತನಾಡಿ ಪಂಚಾಯ್ತಿಯಲ್ಲಿ ಆಡಳಿತ ವಷ್ಟೇ ಅಲ್ಲ ಅತಿ ಮುಖ್ಯವಾಗಿ ಆರ್ಥಿಕ ನಿರ್ವಹಣೆ ಮಾಡಬೇಕಿದೆ. ಇಲಾಖೆಯಲ್ಲಿ ಅಂಗನವಾಡಿ ಮಕ್ಕಳ ನಿರ್ವಹಣೆ ಅನಾಥ, ಸಂಕಷ್ಟ, ದೌರ್ಜನ್ಯಕ್ಕೆ ಒಳಗಾದ ಮಕ್ಕಳ, ಬಾಲಕಾರ್ಮಿಕರ ರಕ್ಷಣೆ, ಈ ಸಂಬಂಧ  ವಕೀಲರ ಸಲಹೆಗಳನ್ನು ಪಡೆಯಲು ಅವಕಾಶವಿದೆ ಎಂದರು.

ಪಂಚಾಯಿತಿ ಸಹಾಯಕ ನಿರ್ದೇಶಕ ರಾಘವೇಂದ್ರ ಮಾತನಾಡಿ, 5 ದಿನಗಳ ತರಬೇತಿ 5 ವರ್ಷದ ಆಡಳಿತಕ್ಕೆ ಸಹಕಾರಿಯಾಗಲಿದೆ. 28 ಇಲಾಖೆಗಳ ಪರಿಚಯ, ಕಾರ್ಯಯೋಜನೆಯ ಮಹತ್ವವನ್ನು ಪಂಚಾಯ್ತಿ ಹೊಂದಿದೆ ಎಂದು ಹೇಳಿದರು.

ಅಕ್ಷರ ದಾಸೋಹದ ರುದ್ರಪ್ಪ ಮಾತನಾಡಿ, ಶಾಲೆಗಳ ಅಭಿವೃಧ್ಧಿಗೆ ಯೋಜನೆ ತಯಾರಿಸಲು ಅವಕಾಶವಿದೆ ಎಂದರು. ಆರೋಗ್ಯಾಧಿಕಾರಿ ಡಾ. ಕೆಂಚಪ್ಪ ಮಾತನಾಡಿ,  ಪ್ರಾಥಮಿಕ ಹಂತದಲ್ಲೇ ಎಲ್ಲರಿಗೂ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರು ತಿಳುವಳಿಕೆ ನೀಡಲಿದ್ದಾರೆ. 6 ಹಳ್ಳಿಗಳಿಂದ ಒಂದು ಉಪಕೇಂದ್ರವಿದ್ದು, ಆರೋಗ್ಯ ಸುಧಾರಣೆಗಾಗಿ ಕೆಲ ಸಮಿತಿಗಳಿವೆ ಎಂದರು.

ಮೈಸೂರಿನಲ್ಲಿ ತರಬೇತಿ ಪಡೆದ ಹೇಮಲತ, ಭೋಜರಾಜ, ಸರಿತ, ಸೌಂದರ್ಯ, ಶ್ವೇತಾ ತರಬೇತುದಾರರಾಗಿ ಪಾಲ್ಗೊಂಡಿದ್ದರು. ಹನುಮಸಾಗರದ ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಮಾತನಾಡಿದರು. 

ಅರಕೆರೆ ಪಂಚಾಯ್ತಿ ಅಧ್ಯಕ್ಷ ಎ.ಬಿ.  ರಂಗಪ್ಪ, ಹರಳಹಳ್ಳಿ ಅಧ್ಯಕ್ಷೆ ನಿರ್ಮಲ, ಅರಬಗಟ್ಟೆ ಅಧ್ಯಕ್ಷೆ ರೇಣುಕಮ್ಮ ಉಪಸ್ಥಿತರಿದ್ದರು. ಹೇಮಲತ ಪಾರ್ಥಿಸಿ, ಮಹಮ್ಮದ್‌ ರಫೀಕ್ ಸ್ವಾಗತಿಸಿದರು.  ಉಮಾ ಓಂಕಾರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!