ಅರಿವಿನ ಕಾರಣ ಮಾನವ ಎಲ್ಲ ಜೀವಿಗಳಿಗಿಂತ ಶ್ರೇಷ್ಠ

ರಾಣೇಬೆನ್ನೂರು, ಫೆ.16- ಈ ಭೂಮಿಯ ಮೇಲೆ ಜನ್ಮವೆತ್ತಿದ ಪ್ರತಿಯೊಂದು ಪ್ರಾಣಿಗಳಿಗಿಂತ ಮನುಜ ಜೀವಿಯು ಬಹು ಭಿನ್ನವಾಗಿದ್ದಾನೆ. 84 ಲಕ್ಷ ಜೀವರಾಶಿಗಳಲ್ಲಿ ಮಾನವನಿಗೆ ಅರಿವಿದೆ. ಪ್ರಾಣಿಗಳಿಗೆ ಅರಿವಿಲ್ಲ. ಹಾಗಾಗಿ ಮನುಷ್ಯ ಶ್ರೇಷ್ಠನಾಗಿದ್ದಾನೆ ಎಂದು ಹಂಪಿ ಹೇಮಕೂಟ ಸಿದ್ಧಾರೂಢ ಮಠದ ಶ್ರೀ ವಿದ್ಯಾನಂದ ಭಾರತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿದ್ಧಾರೂಢ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ ಮಹಾರಥೋ ತ್ಸವದ ಅಂಗವಾಗಿ ಏರ್ಪಡಿಸಿದ್ದ 21ನೇ ವರ್ಷದ ಎರಡನೇ ದಿನದ ವೇದಾಂತ ಪರಿಷತ್ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡಿದರು. 

ಎಲ್ಲ ಜೀವಿಗಳಲ್ಲೂ ನಿದ್ರೆ, ಊಟ, ನೀರಡಿಕೆ, ಸಂಸಾರ ಪ್ರಾಪ್ತಿ, ಆಯಾಸ, ಹಸಿವು, ನೋವು ಇದ್ದೇ ಇದೆ. ಆದರೆ ಜ್ಞಾನ ಮತ್ತು ವಿಚಾರಿಸುವ ಏಕೈಕ ಶಕ್ತಿ ಮನುಜನಿಗೆ ಇರುವ ಕಾರಣಗಳಿಂದಲೇ ಮಾನವ ಜೀವಿ ವಿಭಿನ್ನವಾಗಿ ಕಾಣುತ್ತಾನೆ. ಆದರೂ ಸಹ ಸ್ವಾರ್ಥತೆಯಿಂದಾಗಿ ಪ್ರಾಣಿಗಳಿಗಿಂತಲೂ ಕೀಳಾಗಿ ಜೀವಿಸುತ್ತಾನೆ  ಎಂದರು.

ಸರ್ವರೂ ಜೀವನದಲ್ಲಿ ಧಾರ್ಮಿ ಕತೆಯ ಮನೋಭಾವನೆಯನ್ನು ಅಳವಡಿಸಿ ಕೊಂಡು ಶಿವನಾಮವನ್ನು ಸ್ಮರಿಸುತ್ತಾ ಮುನ್ನಡೆ ದಾಗ ಅಂತಹವರ ಜೀವನ ಸಾರ್ಥಕತೆ ಯಿಂದ ಕೂಡಿರುತ್ತದೆ. ಶಿವನಾಮ ಸ್ಮರಣೆ ಯಿಂದ ಜೀವನದಲ್ಲಿ ಮಾಡಿದ  ಪಾಪ ಕರ್ಮಗಳು ದೂರವಾಗುವುದರ ಮೂಲಕ ಮನುಷ್ಯನು ಮುಕ್ತಿ ಹೊಂದಲು ಸಾಧ್ಯವಾ ಗಲಿದೆ ಎಂದು ಶ್ರೀಗಳು ತಿಳಿಸಿದರು.

ಬುದ್ನಿಯ ಸಿದ್ಧಾರೂಢ ಮಠದ ಪ್ರಭಾನಂದ ಶ್ರೀಗಳು ಮಾತನಾಡಿ, ಜೀವನ ಪೂರ್ಣವಾಗಿ ನಂಬಿಕೆ, ವಿಶ್ವಾಸದ ಮೇಲೆಯೇ ನಿಂತಿದೆ. ಪ್ರತಿಯೊಬ್ಬರಲ್ಲಿ ನಂಬಿಕೆಯೊಂದಿದ್ದರೆ, ಏನನ್ನಾದರೂ ಸಾಧಿಸಬಹುದು. ಔಷಧಿ, ವೈದ್ಯಾಧಿಕಾರಿಗಿಂತಲೂ ಹತ್ತು ಪಟ್ಟು ನಂಬಿಕೆ ಎನ್ನುವುದು ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ನಂಬಿಕೆ ಇದ್ದರೆ ಜೀವನ ಪಾವನ. ಕಳೆದುಕೊಂಡರೆ ಜೀವನ ನಶ್ವರ ಎಂದರು.

ಹುಬ್ಬಳ್ಳಿಯ ಸಿದ್ಧಾರೂಢರು ಸ್ವಯಂ ಪರಶಿವನ ಅವತಾರವಾಗಿದ್ದು, ಮನುಷ್ಯರಲ್ಲಿರುವ ದುರ್ಗುಣಗಳನ್ನು ದೂರ ಮಾಡಿ ಸಾತ್ವಿಕ ಗುಣಗಳನ್ನು ಮೈಗೂಡಿಸಿ ಕೊಳ್ಳುವ ಶಕ್ತಿ ತುಂಬಿದವರು. ಇಂದಿನ ಆಧುನಿಕತೆಯಲ್ಲಿ ಬಹುತೇಕರು ವಿದೇಶಿ ವ್ಯಾಮೋಹಕ್ಕೊಳಗಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯ ಮರೆಯುವುದರ ಜೊತೆಗೆ ತಮ್ಮತನವನ್ನೇ ಮರೆತು ವಿನಾಶದಂಚಿನತ್ತ ಬದುಕು ಸವೆಸುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು. 

ಶ್ರೀಮಠದ ಪೀಠಾಧಿಪತಿ ಮಲ್ಲಯ್ಯ ಸ್ವಾಮೀಜಿ, ಹುಬ್ಬಳ್ಳಿಯ ಸಿದ್ಧಾರೂಢಮಠದ ಶ್ರೀ ಸಚ್ಚಿದಾನಂದ ಸ್ವಾಮಿಜಿ, ಚೌಟಗಿಯ ಲಿಂಗಯ್ಯಸ್ವಾಮೀಜಿ, ತೆಲಗಿಯ ಸಿದ್ಧಾರೂಢ ಮಠದ ಪೂರ್ಣಾನಂದ ಶ್ರೀಗಳು, ಹುಬ್ಬಳ್ಳಿ ಜಡೆಸಿದ್ಧೇಶ್ವರ ಮಠದ ರಾಮಾನಂದ ಶ್ರೀಗಳು ಉಪದೇಶಾಮೃತ ನೀಡಿದರು.

ಸಿದ್ದಪ್ಪ ಪೂಜಾರ, ಬಿರಾದಾರ,  ಶಿವಪ್ಪ ಕುರವತ್ತಿ, ಕರಬಸಪ್ಪ ಮಲ್ಲಾಡದ, ಪೂರ್ಣಿಮಾ ಕುರವತ್ತಿ, ದೇವೇಂದ್ರಪ್ಪ, ಭೀಮರಡ್ಡಿ ಹಾದಿಮನಿ, ರೇವಣಪ್ಪ ಸೇರಿದಂತೆ ಇನ್ನಿತರರಿದ್ದರು. ಪವನಕುಮಾರ ಮಲ್ಲಾಡದ ಸ್ವಾಗತಿಸಿದರು.

error: Content is protected !!