ಹೊನ್ನಾಳಿ, ಏ.19- ಶಾಸಕ ರೇಣುಕಾಚಾರ್ಯರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಕೆರೆಗೆ ನೀರು ತುಂಬಿಸುವುದನ್ನು ಚುನಾವಣಾ ವಿಷಯವಾಗಿಸುವರೇನೋ ಎಂದು ನ್ಯಾಮತಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಳಗುತ್ತಿ ಉಮೇಶ್ ವ್ಯಂಗ್ಯವಾಡಿದರು.
ಅವರು ಸಂಘದ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ರೈತ ಭವನದಲ್ಲಿ ಆಯೋಜಿಸಲಾಗಿದ್ದ ಹಿರಿಯ ರೈತ ಪರ ಹೋರಾಟಗಾರರ ಸನ್ಮಾನ ಸಮಾ ರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇತರೆ ತಾಲ್ಲೂಕುಗಳಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದ್ದು, ನಮ್ಮ ತಾಲ್ಲೂಕಿನಲ್ಲಿ ಈ ಕಾರ್ಯ ಆರಂಭಿಸದಿರು ವುದು ಬೇಸರದ ಸಂಗತಿ. ಶಾಸಕರು ಈ ಕಾರ್ಯಕ್ಕೆ ಮುಂದಾಗದಿದ್ದರೆ, ಅವರ ಮನೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೇರಳ್ಳಿ ಎಚ್. ನಾಗರಾಜಪ್ಪ ಮಾತನಾಡಿ, ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅವೈಜ್ಞಾನಿಕ ಕೃಷಿ ನೀತಿಗಳಿಂದಾಗಿ ರೈತ ಸಮುದಾಯ ಒಕ್ಕಲುತನವನ್ನೇ ಕೈಬಿಡುವ ಹಂತಕ್ಕೆ ತಲುಪುತ್ತಿದೆ. ಭಾರತ ದೇಶ ಕೃಷಿ ಪ್ರಧಾನ ರಾಷ್ಟ್ರ. ಕೃಷಿ ನೀತಿಯಲ್ಲಿ ವೈಜ್ಞಾನಿಕ ನೀತಿಗಳನ್ನು ಅನುಸರಿಸಿದರೆ, ಬೇರೆ ರಾಷ್ಟ್ರಗಳಿಗೆ ಆಹಾರ ಒದಗಿಸುವ ಕ್ರಮವನ್ನು ಜಾರಿಗೆ ತಂದರೆ ದೇಶದ ರೈತರ ಆರ್ಥಿಕತೆ ದ್ವಿಗುಣಗೊಳ್ಳುತ್ತದೆ ಎಂದರು.
ಇದೇ ವೇಳೆ ರೈತಪರ ಹೋರಾಟಗಾರ ರಾದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಜಿ. ಹನುಮಂತಪ್ಪ, ರೈತ ಸಂಘದ ಮಾಜಿ ಅಧ್ಯಕ್ಷರು, ಹಿರಿಯ ರೈತ ಪರ ಹೋರಾಟಗಾರ ಗೋವಿನಕೋವಿ ಜಿ.ಸಿ. ಜಯಣ್ಣ, ರೈತ ಚಿಂತಕ ಗುಡ್ಡೇಹಳ್ಳಿಯ ಹನುಮಂತನಾಯ್ಕ ಅವರನ್ನು ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಜಿ. ಹನುಮಂತಪ್ಪ, ವಿವಿಧ ರೈತ ಸಂಘಟನೆಗಳಿದ್ದು, ಇದರಿಂದ ಯಾವುದೇ ರೈತಪರ ಹೋರಾಟಗಳಿಗೆ ನಿರೀಕ್ಷಿತ ಪ್ರತಿಪಲ ಸಿಗದಂತಾಗಿದೆ. ಇದನ್ನರಿತು ಮುಂದಿನ ದಿನಗಳಲ್ಲಿ ಎಲ್ಲಾ ರೈತ ಸಂಘಟನೆಗಳು ಒಟ್ಟಾಗಿ ಇಡೀ ರಾಜ್ಯಕ್ಕೆ ಒಂದೇ ರೈತ ಸಂಘಟನೆ ರೂಪಿಸಿಕೊಂಡು ಹೋರಾಟ ನಡೆಸಬೇಕು ಎಂದು ಹೇಳಿದರು.
ಸನ್ಮಾನಿತರಾದ ಗೋವಿನಕೋವಿ ಜಯಣ್ಣ ಮಾತನಾಡಿ, ರೈತ ಮುಖಂಡರಾದವರು ಯಾವುದೇ ಕಷ್ಟಗಳಿಗೆ ಜಗ್ಗದೇ, ಹೋರಾಟ ನಡೆಸಬೇಕಾಗುತ್ತದೆ. ಹೊನ್ನಾಳಿ ತಾಲ್ಲೂಕು ಎಚ್.ಎಸ್. ರುದ್ರಪ್ಪನವರಂತಹ ರೈತ ನಾಯಕರನ್ನು ಪಡೆದ ತಾಲ್ಲೂಕು ಇದಾಗಿದ್ದು, ಈ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ ತಾಲ್ಲೂಕಿನ ರೈತರು ಮಾಡಬೇಕು ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಹಿರೇಮಠದ ಬಸವರಾಜಪ್ಪ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಯುವಕ ವಿನಯ್‍ಕುಮಾರ್ ಅವರು ರೈತ ಸಂಘಕ್ಕೆ ಸೇರ್ಪಡೆಗೊಂಡರು. ತಾಲ್ಲೂಕು ಅಧ್ಯಕ್ಷ ಕೆ.ಸಿ. ಬಸಪ್ಪ, ಉಪಾಧ್ಯಕ್ಷ ಎಚ್.ಬಿ. ಬಸವರಾಜಪ್ಪ, ಕೆ. ಪರಮೇಶ್ವರಪ್ಪ, ಸಂಘದ ಕಾರ್ಯದರ್ಶಿ ಕರಿಬಸಪ್ಪ, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.