ಹರಿಹರ, ಫೆ.15- ಪಂಚಮಸಾಲಿ ಸಮಾಜದ ಬಡ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತಿರುವ ಶ್ರೀ ಜಯಮೃತ್ಯುಂಜಯ ಮಹಾಸ್ವಾಮಿಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ದಿನಾಂಕ 21 ರಂದು ನಡೆಯುವ ಸಮಾವೇಶದಲ್ಲಿ ಭಾಗವಹಿಸುವುದಾಗಿ ಸರ್ವೋದಯ ಮಹಾಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿಷಯ ತಿಳಿಸಿದರು. ರಾಜ್ಯದಲ್ಲಿನ ಪಂಚಮಸಾಲಿ ಸಮಾಜದ ಇತಿಹಾಸವನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಕಾರ್ಯವನ್ನು ಮಾಡುತ್ತಿರುವ ಶ್ರೀಗಳ ಕಾರ್ಯ, ಪಂಚ ಲಕ್ಷ ಹೆಜ್ಜೆ. ನಾವು ನಿಜವಾದ ಕಿತ್ತೂರು ರಾಣಿ ಚೆನ್ನಮ್ಮ ವಂಶಸ್ಥರು ಎಂದು ಸಮಾಜದ ಸತ್ಯ ದರ್ಶನವನ್ನು ಜಗತ್ತಿಗೆ ತೋರಿಸುವ ಕಾರ್ಯವಾಗಿದೆ.
ಉಭಯ ಜಗದ್ಗುರುಗಳ ನೇತೃತ್ವದಲ್ಲಿ ಸಮಾಜಕ್ಕೆ ಕೇಳುತ್ತಿರುವ 2ಎ ಮೀಸಲಾತಿ ಬೇಡಿಕೆ ಸಮಾಜದ ಮಕ್ಕಳ ಶಿಕ್ಷಣಕ್ಕೆ ನ್ಯಾಯಯುತವಾಗಿದೆ. ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜದ ಬಡವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಕೂಡಲೇ ಸ್ಪಂದಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ವೋದಯ ಮಹಾಸಂಸ್ಥಾನದ ಅಧ್ಯಕ್ಷ ದೊಗ್ಗಳ್ಳಿ ಗುರುಮೂರ್ತಿ, ಪ್ರಧಾನ ಕಾರ್ಯದರ್ಶಿ ಪಿ. ರುದ್ರಮುನಿ, ಖಜಾಂಚಿ ರವಿಗೌಡ ಮತ್ತು ಇತರರು ಹಾಜರಿದ್ದರು.