ಜಗಳೂರು, ಜು.8- ಪೆಟ್ರೋಲ್ ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಸೈಕಲ್ ಜಾಥಾ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಸೈಕಲ್ ಜಾಥಾ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಹಾತ್ಮಗಾಂಧಿ ವೃತ್ತ, ದಾವಣಗೆರೆ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ದೇಶವ್ಯಾಪಿ ರೈತರು ಬಿತ್ತನೆಗೆ ಟ್ರ್ಯಾಕ್ಟರ್ಗಳನ್ನೇ ಅವಲಂಬಿಸಿದ್ದು, ಡೀಸೆಲ್ ಬೆಲೆ ಏರಿಕೆಯಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ತಾಲ್ಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ದೇಶದಲ್ಲಿ ರೈತ ಕಾರ್ಮಿಕ ವರ್ಗದವರೇ ಶೇ. 70 ರಷ್ಟಿದ್ದು, ಕೋವಿಡ್ನಿಂದ ತತ್ತರಿಸಿ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದ್ದಾರೆ. ಈ ಮಧ್ಯೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಬಡ ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದರು.
ಎಸ್ಟಿ ಘಟಕದ ಸಿ. ತಿಪ್ಪೇಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಹಿಂದುಳಿದ ದಲಿತ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿದ್ದು, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಬಿ. ಲೊಕೇಶ್, ತಿಪ್ಪೇಸ್ವಾಮಿ ಗೌಡ, ಅಹಮ್ಮದ್ ಅಲಿ, ಕೆಂಚಮ್ಮ, ತಿಪ್ಪೇಸ್ವಾಮಿ, ವಿಜಯ್ ಕೆಂಚೋಳ್, ರಾಜಪ್ಪ, ಶಿವಕುಮಾರ್, ಸಿದ್ದಪ್ಪ, ಮಾಳಮ್ಮನಹಳ್ಳಿ ವೆಂಕಟೇಶ್ ಇನ್ನಿತರರು ಭಾಗವಹಿಸಿದ್ದರು.