ಸಿದ್ದಾರೂಢ ಮಠದಲ್ಲಿ ವೇದಾಂತ ಪರಿಷತ್
ರಾಣೇಬೆನ್ನೂರು, ಫೆ.14- ವೇಷಧಾರಿ ಜಂಗಮನನ್ನು ವೇಶ್ಯೆಯರು, ಭೂಷಣಧಾರಿ ಜಂಗಮನನ್ನು ಭೂಪಾಲನು ಪೂಜಿಸುತ್ತಾನೆ. ಜ್ಞಾನವಂತ ಜಂಗಮನನ್ನು ಅರಿತವರು ಪೂಜಿಸುತ್ತಾರೆ ಎಂದು ಬಳ್ಳೂರ ಶ್ರೀ ವಿದ್ಯಾನಂದ ಭಾರತಿ ಮಹಾಸ್ವಾಮೀಜಿ ಹೇಳಿದರು.
ಅವರು ಸ್ಥಳೀಯ ಸಿದ್ದಾರೂಢ ಮಠದಲ್ಲಿ ನಡೆಯುತ್ತಿರುವ 21 ವೇದಾಂತ ಪರಿಷತ್‌ನಲ್ಲಿ `ಶರಣ ಜನರ ಸದುಹೃದಯನಳಿನದೊಳು ಪರಿಶೋಭಿಸುತಿಹುದು ನಿನ್ನ ಪಾದ’ ವಿಷಯ ಕುರಿತು ಸಂದೇಶ ನೀಡುತ್ತಿದ್ದರು.
ವೇಶಭೂಷಣದಿಂದ ಶರಣರಾಗುವದಿಲ್ಲ. ನಿರ್ಮಲ ಹಾಗೂ ಅಭೇದ ಹೃದಯವಂತರು ಶರಣರಾಗುತ್ತಾರೆ. ಶಿಲೆ ದೇವರಾಗಲು ಶರಣರ, ಗುರುಗಳ ಸ್ಪರ್ಶ ಅವಶ್ಯ. ಅದರಂತೆ ಅವರ ದರ್ಶನ ಹಾಗೂ ಸ್ಪರ್ಶದಿಂದಲೇ ಶಿವನನ್ನು ಕಾಣಲು ಸಾಧ್ಯವೆಂದು ಶ್ರೀಗಳು ನುಡಿದರು.
ಧರ್ಮಕಾರ್ಯಗಳಲ್ಲಿ ಭಾಗವಹಿಸುವ ಭಕ್ತರು ಏಕಾಗ್ರತೆ ಹೊಂದಿದವ ರಿರಬೇಕು. ಶೂನ್ಯಾಗ್ರ ಹಾಗೂ ಅನೇಕಾಗ್ರ ಹೊಂದಿದವರಿರಬಾರದು. ಧರ್ಮ ಅಹಂಕಾರದಿಂದ ಕೂಡಿರಬಾರದು ಎಂದು ಜಡೇಸಿದ್ದೇಶ್ವರ ಮಠದ ಶ್ರೀ ರಾಮಾನಂದ ಸ್ವಾಮೀಜಿ ಹೇಳಿದರು. ಸಂಜೆ `ಸುಮ್ಮನೆ ಕಾಲವನು ಕಳೆದು ಸಾವುದು ಚಿತವೆ’ ವಿಷಯ ಕುರಿತು ಎಲ್ಲ ಶ್ರೀಗಳು ಉಪದೇಶ ನೀಡಿದರು.
ಬುದ್ನಿ ಪ್ರಭಾನಂದ ಶ್ರೀಗಳು, ಸಚ್ಚಿದಾನಂದ ಸ್ವಾಮೀಜಿ, ತೆಲಗಿ ಪೂರ್ಣಾನಂದ ಶ್ರೀಗಳು ಹಾಗೂ ಲಿಂಗಯ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.ಪೀಠಾಧಿಪತಿ ಮಲ್ಲಯ್ಯಜ್ಜ ಅವರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕ ಪವನ ಮಲ್ಲಾಡದ ಸ್ವಾಗತಿಸಿ, ನಿರೂಪಿಸಿದರು.