ದಾವಣಗೆರೆ, ಫೆ.11- ಸಾರಿಗೆ ನಿಯಮಾನುಸಾರ ಹಳದಿ ನಂಬರ್ ಪ್ಲೇಟ್ನ ವಾಹನಗಳನ್ನು ಹೊರತುಪಡಿಸಿ, ಉಳಿದ ವಾಹನಗಳಿಗೆ ಬಾಡಿಗೆ ಮಾಡಲು ಅವಕಾಶ ಮಾಡಿಕೊಡದಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಹಳದಿ ನಂಬರ್ ಪ್ಲೇಟ್ನ ಚಾಲಕರು ಮತ್ತು ಮಾಲೀಕರು ಒತ್ತಾಯಿಸಿದ್ದಾರೆ.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಆರ್ಟಿಓ ಅಧಿಕಾರಿ ಶ್ರೀಧರ್ ಆರ್. ಮಲ್ನಾಡ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಎಸ್. ಗಣೇಶ್, ಜಿಲ್ಲೆಯಲ್ಲಿ ಬಿಳಿ ಬಣ್ಣದ ನಂಬರ್ ಪ್ಲೇಟ್ನ ವಾಹನಗಳ ಹಾವಳಿ ಮಿತಿ ಮೀರುತ್ತಿದ್ದು, ಕಾನೂನು ಬಾಹಿರವಾಗಿ ಬಾಡಿಗೆ ಓಡಿಸಲಾಗುತ್ತಿದೆ. ಹಳದಿ ಬೋರ್ಡ್ನ ಚಾಲಕರು, ಮಾಲೀಕರು ಇದರಿಂದ ತೀವ್ರ ಸಂಕಷ್ಟ ಎದುರಿಸುವಂ ತಾಗಿದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಬಿಳಿ ಬಣ್ಣದ ನಂಬರ್ ಪ್ಲೇಟ್ ವಾಹನಗಳಿಗೆ ಬಾಡಿಗೆ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.
ವೈಟ್ ಬೋರ್ಡ್ ಟ್ಯಾಕ್ಸಿಯಲ್ಲಿ ಬಾಡಿಗೆ ಹೋಗಿ ಆಕಸ್ಮಾತ್ ಅಪಘಾತ ಸಂಭವಿಸಿ ಯಾರಾದರೂ ಸಾವನ್ನಪ್ಪಿದರೆ, ತೀವ್ರ ಗಾಯಗೊಂಡರೆ ವಿಮೆ ಸಿಗುವುದಿಲ್ಲ. ವೈಟ್ ಬೋರ್ಡ್ ಟ್ಯಾಕ್ಸಿಗಳಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ತಪ್ಪಿ ಹೋಗುತ್ತಿದೆ. ಮಿತಿ ಮೀರಿದ ಟ್ರಾಫಿಕ್ ನಿಯಮ ಉಲ್ಲಂಘನೆಯಾಗುತ್ತಿದೆ. ಕಾನೂನು ಪ್ರಕಾರ ತೆರಿಗೆ ಕಟ್ಟಿ ಜೀವನ ನಡೆಸುವವರ ಅನ್ನ ಕಸಿಯಲಾಗುತ್ತಿದೆ. ಇದನ್ನು ತಡೆಯಬೇಕು.
-ಎಸ್. ಗಣೇಶ್, ಜಿಲ್ಲಾಧ್ಯಕ್ಷರು, ಚಾಲಕರ ಟ್ರೇಡ್ ಯೂನಿಯನ್
ಬಿಳಿ ಬಣ್ಣದ ವಾಹನಗಳು ಯಾವುದೇ ರೀತಿಯಲ್ಲೂ ಸಾರಿಗೆ ನಿಯಮಗಳನ್ನು ಪಾಲನೆ ಮಾಡದೇ, ಕಾನೂನು ಬಾಹಿರವಾಗಿ ಬಾಡಿಗೆಗೆ ಮಾಡುತ್ತಿವೆ. ಬಿಳಿ ಬಣ್ಣದ ವಾಹನಗಳು ಹೀಗೆ ರಾಜಾರೋಷವಾಗಿ ಬಾಡಿಗೆ ಸಂಚರಿಸುತ್ತಿರುವುದರಿಂದ ನಿಯಮಾನುಸಾರ ಪರ್ಮಿಟ್ ಪಡೆದು ತೆರಿಗೆ ಪಾವತಿಸಿ, ಬಾಡಿಗೆ ಮಾಡುವ ನಮ್ಮಂತಹವರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆಗೆ ಬಿಳಿ ಬಣ್ಣದ ನಂಬರ್ ಪ್ಲೇಟ್ನ ವಾಹನಗಳ ಹಾವಳಿ ತಡೆಯಲಾಗದಿದ್ದರೆ ಜಿಲ್ಲೆಯ ಎಲ್ಲಾ ಹಳದಿ ಬಣ್ಣದ ನಂಬರ್ ಪ್ಲೇಟ್ ವಾಹನಗಳನ್ನೂ ಬಿಳಿ ಬಣ್ಣದ ನಂಬರ್ ಪ್ಲೇಟ್ ಆಗಿ ಮಾಡಿಕೊಡಬೇಕು. ನಾವೂ ಸಹ ಈಗ ಬಿಳಿ ನಂಬರ್ ಪ್ಲೇಟ್ ವಾಹನಗಳಂತೆಯೇ ಬಾಡಿಗೆ ಮಾಡಿಕೊಂಡಿರುತ್ತೇವೆ. ಬಿಳಿ ನಂಬರ್ ಪ್ಲೇಟ್ ಹಾವಳಿ ತಡೆಯಿರಿ ಅಥವಾ ನಮ್ಮ ವಾಹನಗಳಿಗೂ ಬಿಳಿ ಬಣ್ಣದ ನಂಬರ್ ಪ್ಲೇಟ್ಗೆ ಅವಕಾಶ ಮಾಡಿಕೊಡಿ. ಸ್ವಂತ ಬಳಕೆಯ ವೈಟ್ ಬೋರ್ಡ್ ವಾಹನ ಬಾಡಿಗೆ ಮಾಡುತ್ತಿದ್ದರೆ ಅಂತಹ ವಾಹನಗಳನ್ನು ಆರ್ಟಿಓದಿಂದ ಜಪ್ತು ಮಾಡಿ, ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಸಂದೀಪ್ ಬೆಳವನೂರು, ಗಣೇಶ, ಧನಂಜಯ (ಬದ್ರಿ), ಸಂದೀಪ್ ಗೌಡ, ಶಿವು, ಯೋಗೀಶ್, ಮಹೇಶ್, ಉಮೇಶ್, ಬಸವರಾಜ ಸೇರಿದಂತೆ ಇತರರಿದ್ದರು.