ಶಾಸ್ತ್ರೀಯ ನೃತ್ಯ, ಸಂಗೀತಗಳು ಭಾರತೀಯ ಪರಂಪರೆಯ ಜೀವನಾಡಿಗಳು

ಪುರಂದರ, ತ್ಯಾಗರಾಜರ ಸ್ಮರಣೋತ್ಸವದಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ಫೆ.11- ಶಾಸ್ತ್ರೀಯ ಸಂಗೀತ, ನೃತ್ಯ ಗಳು ಭಾರತೀಯ ಪರಂಪ ರೆಯ ಜೀವನಾಡಿಗಳಂತಿದ್ದು, ಸರ್ವಾಂತ ರ್ಯಾಮಿಯಾದ ಭಗವಂತನ ದರ್ಶನಕ್ಕೆ ಇವು ಸಾಧನಗಳು ಎಂದು ಆವರಗೊಳ್ಳ ಪುರವರ್ಗ ಮಠದ  ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಆರ್.ಹೆಚ್.ಗೀತಾ ಮಂದಿರದಲ್ಲಿ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರದ ವತಿಯಿಂದ ಏರ್ಪಾಡಾಗಿದ್ದ `ದಾಸ ಶ್ರೇಷ್ಠ ಪುರಂದರ ದಾಸರ, ತ್ಯಾಗರಾಜರ ಹಾಗೂ ವಾಗ್ಗೇಯಕಾರರ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ನವವಿಧ ಭಕ್ತಿಗಳಲ್ಲಿ ಸಂಗೀತಕ್ಕೂ ಮಹತ್ವದ ಸ್ಥಾನವಿದ್ದು ಸಂಗೀತ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಪ್ರತಿಭೆಯಾಗಿ ಹೊರಹೊಮ್ಮಿ ಪ್ರಕಾಶಿಸಬೇಕು, ಇದಕ್ಕಾಗಿ ಮೊಬೈಲ್ ಸಂಸ್ಕೃತಿಯಿಂದ ದೂರವಿರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಮಾತ ನಾಡಿ, ಕರ್ನಾಟಕದ ಸಾಹಿತ್ಯ ಪರಂಪರೆಯಲ್ಲಿ ದಾಸರ ಮತ್ತು ಶರಣರ ಸಾಹಿತ್ಯವು ಭಕ್ತಿ ರಸಕ್ಕಷ್ಟೇ ಸೀಮಿತವಾಗದೇ ಸಮಾಜ ಸುಧಾರಣೆಗೆ ಸಮರ್ಥ ಸಾಧನಗಳೂ ಆಗಿದ್ದು, ಸಾರ್ವಕಾಲಿಕ ಮೌಲ್ಯವುಳ್ಳದ್ದಾಗಿವೆ. ಪುರಂದರದಾಸರ ಅನೇಕ ಕೀರ್ತನೆಗಳು ಅಥವಾ ಕೃತಿಗಳು ಸಮಾಜದ ಅಂಕು-ಡೊಂಕುಗಳನ್ನು ನಿರ್ಭಿಡೆಯಿಂದ ಟೀಕಿಸಿ ಅದಕ್ಕೆ ಪರಿಹಾರ ಗಳನ್ನೂ ಹೇಳಿವೆ. ಸಂಗೀತಾಭ್ಯಾಸಿಗಳು ಕೃತಿಗಳ ಭಾವಾರ್ಥಗಳನ್ನು ತಿಳಿದು ಹಾಡಬೇಕು ಎಂದರಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ, ಸಾರ್ವಜನಿಕ ರಂಗದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೂ ದಾಸರ ಹಾಗೂ ಶರಣರ ಕೃತಿಗಳನ್ನು ಅರ್ಥ ಮಾಡಿಸಿದಲ್ಲಿ ಭ್ರಷ್ಟಾಚಾರ, ಅನೈತಿಕತೆಯನ್ನು ಕಡಿಮೆ ಗೊಳಿಸಬಹುದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಸಂಗೀತಜ್ಞ ಪ್ರಹ್ಲಾದರಾವ್ ಮಾಗಳ, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಮಾತುಗಳನ್ನಾಡಿದರು. ನಾಟ್ಯ ಭಾರತಿಯ ಶ್ರೀಮತಿ ರಜನಿ ರಘು ನಾಥ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ್ ಕುಲಕರ್ಣಿ, ನೃತ್ಯ ಶಿಕ್ಷಕ ಶ್ರೀ ನಿಧಿ ಕುಲಕರ್ಣಿ, ರಾಜಶೇಖರ್ ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದ ನಾಗೇಶ್ ಭಟ್, ರಾಕೇಶ್, ಶ್ರೀಮತಿ ಜಯಾ ಮತ್ತಿತರರು ಸಹಕರಿಸಿದರು.

ನಾಟ್ಯ ಭಾರತಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಸಂಗೀತ, ನೃತ್ಯಗಳಿಗೆ ಕ್ರಿಸ್ತಾನಂದ, ಭರತೇಶ್ ಖಮಿತ್ಕರ್ ವಾದ್ಯ ಸಹಕಾರ ನೀಡಿದರು. ಶ್ರೀಮತಿ ವಸಂತಾ ಅವರು ವರ್ಣರಂಜಿತ ರಂಗೋಲಿಯಲ್ಲಿ ರಚಿಸಿದ ಪುರಂದರ ದಾಸರ ಬೃಹತ್ ರಂಗೋಲಿ ಚಿತ್ರ ಅತ್ಯಾಕರ್ಷಕವಾಗಿತ್ತು.  

error: Content is protected !!